ನವದೆಹಲಿ: ಲೋಕಸಭೆಯ 543 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಇಂದು ಶುಕ್ರವಾರ ಏಪ್ರಿಲ್ 19ರಂದು ನಡೆಯುತ್ತಿದೆ. ಈ ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಚುನಾವಣೆ ಆಗುತ್ತಿದೆ. ಒಟ್ಟು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಕ್ಷೇತ್ರಗಳಿಗೆ ಇಂದು ಮತದಾನ ಆಗುತ್ತಿದೆ. ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ಆಗುತ್ತಿದೆ.
ರಾಜ್ಯಗಳು
- ತಮಿಳುನಾಡು: 39
- ರಾಜಸ್ಥಾನ: 12
- ಉತ್ತರಾಖಂಡ್: 6
- ಉತ್ತರಪ್ರದೇಶ: 8
- ಅಸ್ಸಾಂ: 5
- ಬಿಹಾರ: 4
- ಛತ್ತೀಸ್ಗಡ: 1
- ಜಮ್ಮು ಕಾಶ್ಮೀರ: 1
- ಮಧ್ಯಪ್ರದೇಶ: 6
- ಮಹಾರಾಷ್ಟ್ರ: 5
- ಪಶ್ಚಿಮ ಬಂಗಾಳ: 3
- ಮಣಿಪುರ್: 2
- ಮೇಘಾಲಯ: 2
- ಮಿಝೋರಾಂ: 1
- ನಾಗಾಲ್ಯಾಂಡ್: 1
- ಪುದುಚೇರಿ: 1
- ಸಿಕ್ಕಿಂ: 1
- ತ್ರಿಪುರಾ: 1
- ಅಂಡಮಾನ್ ನಿಕೋಬಾರ್: 1 ಸ್ಥಾನ
- ಅರುಣಾಚಲಪ್ರದೇಶ: 2
- ಲಕ್ಷದ್ವೀಪ: 1
ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲೂ ಇಂದೇ ಮತದಾನ ನಡೆಯುತ್ತಿರುವುದು ಗಮನಾರ್ಹ. ಛತ್ತೀಸ್ಗಡದಲ್ಲಿ ಇಂದು ಒಂದೇ ಕ್ಷೇತ್ರಕ್ಕೆ ಚುನಾವಣೆ ಆಗುತ್ತಿದೆ. ನಕ್ಸಲ್ಪೀಡಿತ ಬಸ್ತಾರ್ನಲ್ಲಿ ಮಾತ್ರವೇ ಇದು ವೋಟಿಂಗ್ ಇರುವುದು. ಜಮ್ಮು ಕಾಶ್ಮೀರದಲ್ಲೂ ಉಗ್ರ ಪೀಡಿತ ಉಧಂಪುರ್ನಲ್ಲಿ ಮಾತ್ರ ಇಂದು ಚುನಾವಣೆ ಆಗುತ್ತಿದೆ. ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.
ಅಭ್ಯರ್ಥಿಗಳ ಸಂಖ್ಯೆ, ಪಕ್ಷಗಳ ಬಲಾಬಲ
102 ಕ್ಷೇತ್ರಗಳಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ. 8ರಷ್ಟಿದೆ.
102 ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟ ತಲಾ 48 ಸ್ಥಾನಗಳನ್ನು ಹೊಂದಿವೆ. ಬಿಎಸ್ಪಿ 3 ಸ್ಥಾನ ಹೊಂದಿದೆ. ಎಐಎಡಿಎಂಕೆ, ಶಿವಸೇನಾ ಮತ್ತು ಎನ್ಸಿಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದವು.
2019ರ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಡಿಎಂಕೆಯೊಂದೇ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ, ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟ 38 ಸ್ಥಾನಗಳನ್ನು ಪಡೆದಿತ್ತು. ಎನ್ಡಿಎಗೆ ಒಂದು ಸ್ಥಾನ ಮಾತ್ರ ಸಿಕ್ಕಿತ್ತು.
ಏಳು ಹಂತಗಳ ಚುನಾವಣೆ ದಿನಾಂಕಗಳು
ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1ರಂದು ವಿವಿಧ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜೂನ್ 5ರಂದು ಮತ ಎಣಿಕೆ ಆಗುತ್ತದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ಆಗಲಿದೆ.