ಮಾಲೂರು ಪಟ್ಟಣದಲ್ಲಿ ಆಚರಣೆ । ಶ್ರೀ ಧರ್ಮರಾಯಸ್ವಾಮಿ ಹಾಗೂ ಶ್ರೀ ಪಟಾಲಮ್ಮ ಜಾತ್ರೆ
ಮಾಲೂರು : ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ಹಾಗೂ ಶ್ರೀ ಪಟಾಲಮ್ಮ ಜಾತ್ರಾ ಮಹೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಎಲ್ಲ ಸಮುದಾಯಗಳ ಜನತೆ ಸಾಮರಸ್ಯದಿಂದ ಆಚರಿಸುವುದರ ಮೂಲಕ ರಾಜ್ಯದಲ್ಲೇ ಹೆಸರು ಪಡೆದ ಕರಗ ಉತ್ಸವವಾಗಿ ಖ್ಯಾತಿ ಪಡೆದಿದೆ.
ಮಾಲೂರು ಪಟ್ಟಣದ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಪಟ್ಟಣದಲ್ಲಿ ಮೇ ನಲ್ಲಿ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಅದಕ್ಕೂ ಮೊದಲು ಜ. ೩ನೇ ವಾರ ತಿಗಳ ಜನಾಂಗದ ದೇವಾಲಯದ ಮುಖಂಡರು ಸಭೆ ಸೇರಿ ಹೂ ಕರಗ ಹೊರುವ ಪೂಜಾರಿಯನ್ನು ಮತ್ತು ಹಸಿ ಕರಗ ಹೊರಲು ಉಳಿದ ಇಬ್ಬರನ್ನು ಆಯ್ಕೆ ಮಾಡುತ್ತಾರೆ. ಅದಾದ ನಂತರ ಕರಗ ಪೂಜಾರಿಗೆ ಕಠಿಣ ಅಭ್ಯಾಸ ಆರಂಭವಾಗುತ್ತದೆ. ಈ ಭಾರಿ ಕರಗದ ವೆಂಕಟರಮಣ ಅವರು ಕರಗವನ್ನು ಹೊರಲಿದ್ದು, ಸಕಲ ರೀತಿಯಲ್ಲಿ ಸಿದ್ದತೆ ಕೈಗೊಂಡಿದ್ದಾರೆ.
ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ಕರಗ ಉತ್ಸವದ ಮೊದಲ ದಿನ ಬುಧವಾರ ಮೇ 1 ರಂದು ದೇವಾಲಯದ ಆವರಣದಲ್ಲಿ ಗಣಪತಿ ಹೋಮದೊಂದಿಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ರಾತ್ರಿ ದೇವಾಲಯದ ಹಿರಿಯರು ಕರಗ ಹೊರುವ ಪೂಜಾರಿ ಮನೆಗೆ ತೆರಳಿ ಪೂಜಾರಿಯನ್ನು ದೇವಾಲಯಕ್ಕೆ ಕರೆತರುತ್ತಾರೆ.
೨ನೇ ದಿನವಾದ 2 ಗುರುವಾರ ಪಟ್ಟಣದ ಕೋಲಾರ ರಸ್ತೆಯ ಶ್ರೀ ಸುದ್ದಗುಂಟೆ ಆಂಜನೇಯ ಸ್ವಾಮಿ ದೇವಾಲಯದ ಕೊಳದ ಹತ್ತಿರ ಬಂದು ಪ್ರದಕ್ಷಿಣಿ ಹಾಕಲಾಯಿತು. ಹಸಿಕರಗವನ್ನು ಮೂರು ಜನ ಹೊತ್ತು ಮಂಗಳವಾದ್ಯಗಳ ತಾಳಕ್ಕೆ ತಕ್ಕಂತೆ ನರ್ತಿಸುತ್ತಾ ಹೊರ ಬಂತು. ಹೂ ಕರಗ ಹೊರುವ ಪೂಜಾರಿ ಮಧ್ಯ ಭಾಗದಲ್ಲಿ ಇರುತ್ತಾರೆ. ಹಸಿಕರಗ ಕೇವಲ ನಿಗಧಿ ಪಡಿಸಿದ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಾ ದೇವಾಲಯಗಳಲ್ಲಿ ಭಕ್ತರಲ್ಲಿ ಪೂಜೆಗಳನ್ನು ಸ್ವೀಕರಿಸಿ ದೇವಾಲಯ ಪ್ರವೇಶಿಸಲಾಯಿತು.
ಮೇ 3 ಶುಕ್ರವಾರ ದೇವಾಲಯ ಸಮಿತಿಗೆ ಒಳಪಟ್ಟ ಹಳ್ಳಿಗಳಿಂದ ಮಹಿಳೆಯರು ಹಾಗೂ ಗ್ರಾಮಸ್ಥರು ದೇವರಿಗೆ ಆರತಿ ತಂಬಿಟ್ಟು ದೀಪಗಳನ್ನು ತಲೆಯ ಮೇಲೆ ಹೊತ್ತು ಮಂಗಳವಾಧ್ಯಗಳ ಸಮೇತ ಪಟ್ಟಣಕ್ಕೆ ಆಗಮಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ನಂತರ ದೇವಾಲಯ ಪ್ರವೇಶಿಸಿ ದೇವರಿಗೆ ಆರತಿ ತಂಬಿಟ್ಟು ದೀಪಗಳನ್ನು ಅರ್ಪಿಸಿ ಹರಕೆಯನ್ನು ಸಲ್ಲಿಸುತ್ತಾರೆ.
ಮೇ 4 ಶನಿವಾರದಂದು ಪಟ್ಟಣದ ಗಾಂದಿ ವೃತ್ತದಲ್ಲಿರುವ ಪಟಾಲಮ್ಮ ದೇವಾಲಯದಲ್ಲಿ ಸಿಡಿ ಉತ್ಸವ ನಡೆಯಲಿದೆ. ಸಿಡೀರಣ್ಣ ಎಂಬ ದೇವರನ್ನು ಭುಜಗಳ ಮೇಲೆ ಹೊತ್ತ ಪೂಜಾರಿ ಹಲಗೆ ತಾಳಕ್ಕೆ ನರ್ತಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ನಂತರ ಪಟಾಲಮ್ಮ ದೇವಾಲಯದ ಆವರಣದಲ್ಲಿ ಸಿಡಿರಣ್ಣ ಮೂರ್ತಿಯನ್ನು ವಿಶೇಷವಾಗಿ ಸಿದ್ಧ ಪಡಿಸಿರುವ ಸಿಡಿ ಕಂಭಕ್ಕೆ ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಕ್ತರು ದೇವರ ಮೇಲೆ ಬಾಳೆಹಣ್ಣು, ದವನ ಹಾಗೂ ಹೂವಗಳನ್ನು ಎಸದು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ಇದೇ ಸಂದರ್ಭದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅರ್ಜುನ ಮತ್ತು ದ್ರೌಪದಿ ದೇವರುಗಳಿಗೆ ಶಾಸ್ತೊತ್ತವಾಗಿ ವಿವಾಹ ಮಹೋತ್ಸವವನ್ನು ಕರಗ ಪೂಜಾರಿ ಸಮ್ಮುಖದಲ್ಲೇ ಕುಲ ಪುರೋಹಿತರು ನೆರವೇರಿಸುತ್ತಾರೆ. ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಪೂಜಾ ವಿಧಿಗಳು ಪ್ರಾರಂಭವಾಗುತ್ತದೆ.
ಕರಗದ ಪೂಜಾರಿಗೆ ಬಳೆ ತೊಡಿಸುವ ಶಾಸ್ತ್ರಗಳು ಮುಗಿದ ನಂತರ ರಾತ್ರಿ 11ಗಂಟೆಗೆ ಹೂವಿನ ಕರಗ ಹೊತ್ತ ಪೂಜಾರಿ ದೇವಾಲಯದಿಂದ ಹೊರ ಬರುತ್ತಿದ್ದಂತೆ ನೂರಾರು ಮಂದಿ ವೀರ ಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ಕತ್ತಿಯಿಂದ ಹೊಡೆದುಕೊಂಡು ಭಕ್ತಿಯನ್ನು ಪ್ರದರ್ಶಿಸುತ್ತಾರೆ. ಅಲಂಕೃತವಾಗಿ ಜೋಡಿಸಿರುವ ಕರಗದ ಮೇಲೆ ನೆರದಿರುವ ಭಕ್ತಾಧಿಗಳು ಮಲ್ಲಿಗೆಯ ಹೂವುಗಳನ್ನು ಹಾಕಿ ತಮ್ಮ ಹರಿಕೆಯನ್ನು ನೇರವೇರಿಸುವಂತೆ ಪ್ರಾರ್ಥಿಸುತ್ತಾರೆ.
ಕರಗದ ಪೂಜಾರಿ ದೇವಾಲಯ ಪ್ರದಕ್ಷಿಣೆ ಹಾಕಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಪ್ರತಿ ಕುಟುಂಗಳಿಂದ ಪೂಜೆ ಸ್ವೀಕರಿಸುತ್ತಾರೆ. ಈ ಸಂದರ್ಭದಲ್ಲಿ ಕರಗದ ಪೂಜಾರಿಯಿಂದ ಆಕರ್ಷಕ ನೃತ್ಯವು ನಡೆಯಲಿರುವ. ಸೋಮವಾರ ಬೆಳಗ್ಗೆ ಪಟ್ಟಣದ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಆವರಣಕ್ಕೆ ಆಗಮಿಸಿ ಆಗ್ನಿಕುಂಡ ಪ್ರವೇಶಿಸಿ ನಂತರ ದೇವಾಲಯ ಪ್ರವೇಶಿಸಿ ಕರಗವನ್ನು ಇಳಿಸಿದ ನಂತರ ಕರಗದ ಉತ್ಸವ ಕಾರ‍್ಯಕ್ರಮ ಮುಕ್ತಾಯವಾಗಲಿದೆ.
ಬಾಕ್ಸ್…
ನೂರಾರು ವರ್ಷಗಳ ಇತಿಹಾಸ: ಪಟ್ಟಣದಲ್ಲಿ ಸುಮಾರು 5 ದಿನಗಳ ಕಾಲ ನಡೆಯುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವ ಕಾರ‍್ಯಕ್ರಮಕ್ಕೆ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪಟ್ಟಣದಲ್ಲಿ ನಡೆಯುವ ಕರಗ ಉತ್ಸವದಲ್ಲಿ ಎಲ್ಲಾ ಸಮುದಾಯಗಳ ಜನತೆ ಭಾಗವಹಿಸುವುದರ ಮೂಲಕ ಸಾಮರಸ್ಯ ಮೂಡಿಸುತ್ತಿದ್ದಾರೆ. ಪಟ್ಟಣ ಸೇರಿದಂತೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ, ಕೇರಳ ಸೇರಿದಂತೆ ಹಲವಾರು ರಾಜ್ಯಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಭಾಗವಹಿಸುವ ನಿರೀಕ್ಷೆ ಇದ್ದು, ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಮೇ.೦1 ರಿಂದ ಮೇ.07 ರವರೆಗೆ ಶ್ರೀ ಧರ್ಮರಾಯ ಸ್ವಾಮಿ ಕರಗ ಮಹೋತ್ಸವ ಕಾರ್ಯಕ್ರಮಗಳು 7 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ದೇವಾಲಯ ಸಮಿತಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಶ್ರೀ ಧರ್ಮರಾಯ ದೇವಾಲಯ ಸಮಿತಿ ಅಧ್ಯಕ್ಷ ಎಂ.ಪಿ.ವಿಜಯ್‌ಕುಮಾರ್ ಹೇಳಿದರು.

