ಶ್ರೀರಂಗಪಟ್ಟಣ , ಡಿಸೆಂಬರ್ 16, 2025 : ಐತಿಹಾಸಿಕ ಶ್ರೀರಂಗಪಟ್ಟಣದ ಬಸ್ ನಿಲ್ದಾಣ ಇದೀಗ ಕಳ್ಳರ ಪಾಲಿನ ‘ಹಾಟ್ ಸ್ಪಾಟ್’ ಆಗಿ ಮಾರ್ಪಟ್ಟಿದ್ದು, ಪ್ರಯಾಣಿಕರು ಆತಂಕದಲ್ಲೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಎಂಬಂತೆ ಇಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ.
ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನಾಭರಣಗಳು, ಪುರುಷರ ಪರ್ಸ್ ಮತ್ತು ಮೊಬೈಲ್ ಫೋನ್‌ಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿವೆ. ಜನದಟ್ಟಣೆ ಹೆಚ್ಚಿರುವ (ರಶ್ ಇರುವ) ಬಸ್‌ಗಳನ್ನೇ ಗುರಿಯಾಗಿಸಿಕೊಳ್ಳುವ ಕಳ್ಳ-ಕಳ್ಳಿಯರು, ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ ಬಂದು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಕ್ಷಣಮಾತ್ರದಲ್ಲಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದಾರೆ.
ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆಯು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ ಹಾಗೂ ಪೊಲೀಸರನ್ನು ಸಹ ನಿಯೋಜಿಸಿದೆ. ಆದರೂ ಸಹ ಕಳ್ಳರ ಹಾವಳಿ ಮಾತ್ರ ಕಡಿಮೆಯಾಗಿಲ್ಲ. ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಅವ್ಯಾಹತವಾಗಿ ಮುಂದುವರೆದಿದ್ದು, ಕಳ್ಳರ ಕೈಚಳಕವನ್ನು ತಡೆಯಲಾಗದೆ ಪೊಲೀಸರು ಕೂಡ ಹೈರಾಣಾಗಿದ್ದಾರೆ. ಒಟ್ಟಿನಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಈ ಕಳ್ಳತನದ ಸರಣಿಯಿಂದಾಗಿ ಶ್ರೀರಂಗಪಟ್ಟಣ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುವಂತಾಗಿದೆ.
