ಮೈಸೂರು , ನವೆಂಬರ್ 26, 2025 : ನಾಡಿನೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದ್ದು, ಮೈಸೂರಿನ ಹೊರವಲಯದ ಸಿದ್ದಲಿಂಗಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಇಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹಳೆ ಮೈಸೂರು ಭಾಗದಲ್ಲಿ ಇದನ್ನು ‘ಸುಬ್ರಹ್ಮಣ್ಯ ಷಷ್ಠಿ’ ಎಂದು ಆಚರಿಸಿದರೆ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ‘ಚಂಪಾ ಷಷ್ಠಿ’ ಎಂದು ಆಚರಿಸಲಾಗುತ್ತದೆ.
ಒಡೆಯರ್ ಕೊಡುಗೆ ‘ಬೆಳ್ಳಿಯ ನಾಗಾಭರಣ’ ಧಾರಣೆ
ಸಿದ್ದಲಿಂಗಪುರದ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಠಿ ಅಂಗವಾಗಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆಗಳು ಆರಂಭಗೊಂಡವು. ಮೂಲ ದೇವರಿಗೆ ಮೈಸೂರಿನ ಅರಸರು ಕೊಡುಗೆಯಾಗಿ ನೀಡಿರುವ ಬೆಳ್ಳಿಯ ನಾಗಾಭರಣವನ್ನು ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ನಾಗಾಭರಣಕ್ಕೆ ವಿಶೇಷ ಇತಿಹಾಸವಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯ ಪೀಡಿತರಾಗಿದ್ದಾಗ, ಒಳಿತಾಗಲೆಂದು ಮೈಸೂರಿನ ಅರಮನೆಯಿಂದ ಹರಕೆ ಸಲ್ಲಿಕೆಯಾಗಿತ್ತು. ಒಡೆಯರ್ ಗುಣಮುಖರಾದ ಹಿನ್ನೆಲೆಯಲ್ಲಿ ಈ ಬೆಳ್ಳಿಯ ನಾಗಾಭರಣವನ್ನು ದೇಗುಲಕ್ಕೆ ಕೊಡುಗೆಯಾಗಿ ನೀಡಲಾಗಿತ್ತು. ಅಂದಿನಿಂದ ಪ್ರತಿವರ್ಷ ಷಷ್ಠಿಯ ದಿನದಂದು ಇದನ್ನು ಧಾರಣೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಸಾವಿರಾರು ಭಕ್ತರ ಆಗಮನ, ಪೊಲೀಸ್ ಬಂದೋಬಸ್ತ್
ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯಲು ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಸಿದ್ದಲಿಂಗಪುರಕ್ಕೆ ಆಗಮಿಸಿದ್ದರು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಯಾವುದೇ ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ದೇಗುಲದ ಆಸುಪಾಸಿನಲ್ಲಿರುವ ಹುತ್ತಗಳಿಗೆ ಭಕ್ತರು ಹಾಲು ಎರೆದು ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶಾಮ್ ಭೇಟಿ
ಸಿದ್ದಲಿಂಗಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶಾಮ್ ಭೇಟಿ ನೀಡಿದ್ದರು. ಈ ವೇಳೆ ಪ್ರತಿನಿಧಿ ನ್ಯೂಸ್ ಜೊತೆ ಮಾತನಾಡಿದ ಸ್ನೇಕ್ ಶಾಮ್, ನಾನು ಇದುವರೆಗೆ ಸುಮಾರು 96 ಸಾವಿರ ಹಾವುಗಳನ್ನು ಸಂರಕ್ಷಣೆ ಮಾಡಿದ್ದೇನೆ.ಹಾವುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಹಾಗಾಗಿ ಅನಾದಿಕಾಲದಿಂದಲೂ ಹಾವುಗಳನ್ನು ಪೂಜಿಸುತ್ತಾ ಬರಲಾಗಿದೆ.ಷಷ್ಠಿಯ ದಿನ ಹುತ್ತಗಳಿಗೆ ಹಾಲನ್ನೆರೆಯುವುದರಿಂದ ಹಾವುಗಳಿಗೆ ತೊಂದರೆಯಾಗುತ್ತದೆ.ಹಾವು ಹಾಲನ್ನು ಕುಡಿಯುವುದಿಲ್ಲ.ಹಾವು ಸುಮ್ಮನೆ ಯಾರಿಗೂ ಕಚ್ಚುವುದಿಲ್ಲ. ಹಾಗಾಗಿ ಯಾರು ಕೂಡ ಹಾವುಗಳನ್ನು ಕೊಲ್ಲಬೇಡಿ ಎಂದು ಕರೆ ನೀಡಿದರು


