ಗುಂಡ್ಲುಪೇಟೆ, ನವೆಂಬರ್ 24, 2025 : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತಗ್ಗಲೂರು ಗ್ರಾಮದ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಜಾನುವಾರುಗಳನ್ನು ಕೊಂದು, ರೈತರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಇದರೊಂದಿಗೆ ಚಿರತೆ ಕಾಟದಿಂದ ಭಯಪಡುತ್ತಿದ್ದ ಸ್ಥಳೀಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ತಗ್ಗಲೂರು ಗ್ರಾಮದ ಬಳಿ ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಚಿರತೆಯು ಜಾನುವಾರುಗಳನ್ನು ಕೊಂದು ಹಾಕುತ್ತಾ ರೈತರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈ ಕಾರಣದಿಂದಾಗಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಹ ಭಯ ಪಡುತ್ತಿದ್ದರು. ರೈತರ ಆತಂಕವನ್ನು ಮನಗಂಡು, ಬಫರ್ ವಲಯದ ಅರಣ್ಯಾಧಿಕಾರಿಗಳು ತಗ್ಗಲೂರು ಗ್ರಾಮದ ರೈತ ತಮ್ಮಯಪ್ಪ ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದರು. ನಿನ್ನೆ ರಾತ್ರಿ ಈ ಬೋನಿಗೆ ಸುಮಾರು 5 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಈ ಬಗ್ಗೆ ಬಫರ್ ವಲಯದ ಅರಣ್ಯಾಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ಅಧಿಕಾರಿಗಳು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ, ತಮಿಳುನಾಡು ಗಡಿಭಾಗದಲ್ಲಿರುವ ಬಂಡೀಪುರ ವಲಯದ ಅರಣ್ಯದೊಳಗೆ ಬಿಡುಗಡೆ ಮಾಡಿದ್ದಾರೆ. ಈ ಕ್ರಮದಿಂದಾಗಿ ತಗ್ಗಲೂರು ಗ್ರಾಮದ ರೈತರು ನೆಮ್ಮದಿ ಪಡೆದಿದ್ದಾರೆ.
