ಮೈಸೂರು, ಫೆಬ್ರವರಿ 14, 2026 : ಸಾಂಸ್ಕೃತಿಕ ನಗರಿ ಮೈಸೂರಿನ ಪವಿತ್ರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆರೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಮೈಸೂರು ತಾಲ್ಲೂಕು ತಹಸೀಲ್ದಾರ್ ಮಹೇಶ್ ನೇತೃತ್ವದಲ್ಲಿ ಇಂದು ಕಾರ್ಯಾಚರಣೆ ನಡೆಯಿತು.
ಈ ಜಾಗ ನಮಗೆ ಸೇರಿದ್ದೆಂದು ಖಾಸಗಿಯವರು ಹಾಕಿಕೊಂಡಿದ್ದ ಎರಡು ನಾಮಫಲಕಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಇದರ ಬೆನ್ನಲ್ಲೇ ಒತ್ತುವರಿ ಜಾಗದ ಎರಡು ಕಡೆಗಳಲ್ಲಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ಗೋಡೆಗಳನ್ನು ಕೂಡ ಭಾಗಶಃ ಧ್ವಂಸಗೊಳಿಸುವ ಮೂಲಕ ಆಡಳಿತ ಯಂತ್ರ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿದೆ.

ಈ ಪ್ರಕರಣದ ಕುರಿತು ಈ ಹಿಂದೆ ತೀವ್ರವಾಗಿ ಧ್ವನಿ ಎತ್ತಿದ್ದ ಶಾಸಕ ಶ್ರೀವತ್ಸ ಅವರು, ಶಿವರಾತ್ರಿ ಹಬ್ಬ ಮುಗಿಯುವುದರೊಳಗೆ ಒತ್ತುವರಿ ತೆರವು ಮಾಡಬೇಕು, ಇಲ್ಲದಿದ್ದರೆ ನಾವೇ ಖುದ್ದಾಗಿ ತೆರವು ಮಾಡುತ್ತೇವೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಶಾಸಕರ ಈ ಗಡುವು ಮುಕ್ತಾಯವಾಗುತ್ತಿದ್ದಂತೆಯೇ ಎಚ್ಚೆತ್ತ ತಹಸೀಲ್ದಾರ್ ಮಹೇಶ್ ಅವರು ಸ್ಥಳ ಪರಿಶೀಲನೆ ನಡೆಸಿ, ಗುರುತು ಮಾಡಲಾದ ಜಾಗಗಳಲ್ಲಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ತಹಸೀಲ್ದಾರ್ ಮಹೇಶ್ ಅವರು, ಸರ್ಕಾರಿ ದಾಖಲೆಗಳ ಪ್ರಕಾರ ಸದರಿ ಸ್ಥಳದಲ್ಲಿ 6.10 ಎಕರೆ ಜಾಗವು ಕೆರೆ ಎಂದು ನಮೂದಾಗಿದೆ. ಇಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಒತ್ತುವರಿ ಸಾಬೀತಾಗಿದೆ. ಈ ವೇಳೆ ಕಾಂಪೌಂಡ್ ನಿರ್ಮಿಸಿದ್ದವರು ತಾವೇ ಸ್ವತಃ ನಾಳೆಯೊಳಗೆ ತೆರವು ಮಾಡಿಕೊಳ್ಳುವುದಾಗಿ ಮನವಿ ಮಾಡಿದ್ದಾರೆ. ಒಂದು ವೇಳೆ ನಾಳೆಯೊಳಗೆ ತೆರವು ಮಾಡದಿದ್ದರೆ ಸೋಮವಾರ ಮತ್ತೆ ಕಾರ್ಯಾಚರಣೆ ನಡೆಸಿ ಸಂಪೂರ್ಣ ತೆರವು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಇಲ್ಲಿ ಕೇವಲ 3.17 ಎಕರೆ ಕೆರೆ ಜಾಗ ಮಾತ್ರ ಒತ್ತುವರಿಯಾಗಿಲ್ಲ, ಬದಲಾಗಿ ಅಕ್ರಮವಾಗಿ 10 ಮನೆಗಳನ್ನು ನಿರ್ಮಿಸಲಾಗಿದೆ ಮತ್ತು 20ಕ್ಕೂ ಹೆಚ್ಚು ನಿವೇಶನಗಳನ್ನು ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಕೆರೆ ಒತ್ತುವರಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಮುಂದಿನ ದಿನಗಳಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
