ನಂಜನಗೂಡು: ಮನೆ ಬಾಡಿಗೆ ಕೇಳುವ ನೆಪದಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ವೃದ್ಧೆಗೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಭೀಕರ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವೃದ್ಧೆಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂಜನಗೂಡಿನ ದೇವೀರಮ್ಮನಹಳ್ಳಿಯ ಸಾಯಿಬಾಬಾ ದೇವಸ್ಥಾನದ ಬಳಿ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ದ್ರಾಕ್ಷಾಯಿಣಿ (65) ಹಲ್ಲೆಗೊಳಗಾದ ವೃದ್ಧೆ. ಒಂಟಿಯಾಗಿದ್ದ ದ್ರಾಕ್ಷಾಯಿಣಿ ಅವರ ಮನೆಗೆ ದುಷ್ಕರ್ಮಿಗಳು ಮನೆ ಬಾಡಿಗೆಗೆ ಬೇಕು ಎಂಬ ನೆಪದಲ್ಲಿ ಪ್ರವೇಶಿಸಿದ್ದಾರೆ. ಮನೆ ತೋರಿಸುತ್ತಿದ್ದ ವೇಳೆ, ದುಷ್ಕರ್ಮಿಗಳು ವೃದ್ಧೆ ದ್ರಾಕ್ಷಾಯಿಣಿಯವರನ್ನು ಒಳಗೆ ತಳ್ಳಿ ಕಬ್ಬಿಣದ ರಾಡಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯು ಎಷ್ಟು ತೀವ್ರವಾಗಿತ್ತು ಎಂದರೆ, ಅದರ ರಭಸಕ್ಕೆ ದ್ರಾಕ್ಷಾಯಿಣಿಯವರ ಹಲ್ಲುಗಳು ಪುಡಿಪುಡಿಯಾಗಿ ಹೊರಬಂದು ಬಿದ್ದಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದ್ರಾಕ್ಷಾಯಿಣಿ ಅವರನ್ನು ಕಂಡು, ದುಷ್ಕರ್ಮಿಗಳು ಅವರು ಮೃತಪಟ್ಟಿದ್ದಾರೆಂದು ಭಾವಿಸಿದ್ದಾರೆ. ಬಳಿಕ, ಅವರು ಧರಿಸಿದ್ದ ಚಿನ್ನದ ಒಡವೆಗಳನ್ನು ದೋಚಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.
ದ್ರಾಕ್ಷಾಯಿಣಿ ಅವರು ಬಹಳ ಸಮಯದವರೆಗೆ ಕೆಳಗೆ ಬಾರದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ದ್ರಾಕ್ಷಾಯಿಣಿ ಅವರನ್ನು ತಕ್ಷಣವೇ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನಂಜನಗೂಡು ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
