ಬೆಂಗಳೂರು: ಹಾಸನ ಸಂಸದ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಕೆಲ ದಿನಗಳಿಂದ ಹರದಾಡುತ್ತಿರುವ ವಿಡಿಯೋದಿಂದ ಮುಜುಗರವಾಗಿದೆ. ಈ ವಿಡಿಯೋಗಳಲ್ಲಿ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ತಪ್ಪಿತಸ್ಥರು ಎಂಬ ಭಾವನೆ ಉಂಟಾಗಿದೆ. ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾ ಬಂದಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ ಮಾಡಿದ್ದರು. ಲಾಟರಿ ನಿಷೇಧಿಸಿ ಹೆಣ್ಣು ಮಕ್ಕಳ ಪುಣ್ಯಕ್ಕೆ ಪಾತ್ರರಾಗಿದ್ದಾರೆ. ಪಕ್ಷದ ಚಿಹ್ನೆಯಲ್ಲಿ ಭತ್ತದ ತೆನೆಹೊತ್ತ ಮಹಿಳೆಯ ಚಿತ್ರ ಇದೆ. ಭತ್ತದ ತೆನೆಹೊತ್ತ ಮಹಿಳೆಯ ಚಿತ್ರ ಹೆಣ್ಣಿನ ಗೌರವವನ್ನ ಪ್ರತಿಪಾದಿಸುತ್ತೆ. ಇಂತಹ ಪರಂಪರೆ ಹೊಂದಿರುವ ಪಕ್ಷಕ್ಕೆ ಮುಜುಗರ ತಂದಿರುವುದು ಸುಳ್ಳಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ರಚಿಸಿದೆ. ಪಕ್ಷ ಕೂಡ ಆಂತರಿಕ ಸಮಿತಿ ರಚನೆ ಮಾಡಿ ಸತ್ಯಾಸತ್ಯ ತಿಳಿಸಬೇಕು.ಈ ಪ್ರಕರಣದಿಂದ ಸದ್ಯ ಜೆಡಿಎಸ್ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪಕ್ಷದ ಮುಜುಗರ ತಪ್ಪಿಸಲು ಪ್ರಜ್ವಲ್ರನ್ನ ಅಮಾನತುಗೊಳಿಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಬಂಧನಕ್ಕೆ ಒತ್ತಾಯ
ಹಾಸನ ಜಿಲ್ಲೆಯ ಹಲವು ಮಹಿಳೆಯರ ಜೊತೆಗಿನ ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವಂತೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆಗ್ರಹಿಸಿದೆ. ಅಲ್ಲದೆ ಪೆನ್ಡ್ರೈವ್ ಮೂಲಕ ಮಹಿಳೆಯರ ಅಶ್ಲೀಲ ವೀಡಿಯೋ ಹಂಚಿ ಅವರ ಖಾಸಗಿ ಜೀವನಕ್ಕೆ ಧಕ್ಕೆ ತಂದವರ ವಿರುದ್ಧವೂ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು, ಜನಪರ, ದಲಿತ, ಮಹಿಳಾ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಲಿವೆ.
ಜೆಡಿಎಸ್ನಿಂದಲೂ ದೂರು
ಏಪ್ರಿಲ್ 21ರಂದು ಪೆನ್ಡ್ರೈವ್, ಸಿಡಿ ಮೂಲಕ ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜೆಡಿಎಸ್ ಚುನಾವಣಾ ಏಜೆಂಟ್, ಏಪ್ರಿಲ್ 23ರಂದು ಅರೇಹಳ್ಳಿ ನವೀನ್ ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಹಾಸನ ಎನ್ ಡಿ ಎ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಮಣಿಸಲು ಅವರ ಮುಖವನ್ನ ಮಾರ್ಫ್ ಪೋಟೋ ವಿಡಿಯೋ ಮಾಡಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ನವೀನ್ ಗೌಡ ಎಂಬುವರ ವಿರುದ್ಧ FIR ದಾಖಲಾಗಿದೆ.