ಮೈಸೂರು, ಡಿಸೆಂಬರ್ 2, 2025 : 2025-26ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಿಯಮಬಾಹಿರ ಆಯ್ಕೆಯ ಕೌನ್ಸಿಲ್ ಪ್ರಕ್ರಿಯೆಯನ್ನು ತಡೆಯುವಂತೆ ಆಗ್ರಹಿಸಿ ನಾಳೆಯಿಂದ ಅತಿಥಿ ಉಪನ್ಯಾಸಕರುಗಳು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿರುವುದಾಗಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಹೇಶ್ ಜಿ ತಿಳಿಸಿದರು.
ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಾದ್ಯಂತ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತು, ಹದಿನೈದು, ಇಪ್ಪತ್ತು ವರ್ಷಗಳಿಂದ 10,972 ಅತಿಥಿ ಉಪನ್ಯಾಸಕರು ಅತ್ಯಂತ ಕನಿಷ್ಠ ಗೌರವಧನ ವೇತನ ಪಡೆದು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಸಕ್ತ 2025-26ನೇ ಸಾಲಿನಲ್ಲಿ 6,904 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದಿಲ್ಲವೆಂಬ ಕಾರಣಕ್ಕಾಗಿ ಇವರೆಲ್ಲರನ್ನು ಕೆಲಸದಿಂದ ತೆಗೆದು ಹಾಕಲು, ಹೊಸದಾಗಿ ನೇಮಕಾತಿ ಮಾಡಲು ಈಗಾಗಲೇ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮಾಡಲಾಗಿದೆ.
ಇದರ ಪರಿಣಾಮವಾಗಿ ಸಾವಿರಾರು ಅತಿಥಿ ಉಪನ್ಯಾಸಕರು ಬೀದಿಗೆ ಬೀಳುವಂತಾಗಿದೆ. ಈ ರೀತಿ ಬೀದಿಗೆ ಬೀಳುವ ಅತಿಥಿ ಉಪನ್ಯಾಸಕರು ಬೇರೆಲ್ಲೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮೀತಿ ಮೀರಿದೆ. ಅಲ್ಲದೇ ಇವರನ್ನೇ ಅವಲಂಬಿಸಿರುವ ಕುಟುಂಬ, ವಯೋವೃದ್ದ ತಂದೆ ತಾಯಿಯರ ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಹಾಗಾಗಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಕೌನ್ಸಿಲಿಂಗ್ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ನೀತಿಗೂ ವಿರುದ್ಧವಾಗಿದೆ. ಹೀಗಾಗಿ ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿ ನಾಳೆಯಿಂದ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತೇವೆಂದು ತಿಳಿಸಿದರು. ಹಾಗೂ ಈ ಹೋರಾಟದಲ್ಲಿ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಭಾಗಿಯಾಗುವ ಮೂಲಕ ಬೆಂಬಲ ನೀಡಬೇಕು ಎಂದು ಡಾ. ಮಹೇಶ್ ಜಿ. ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಹನುಮಂತೇಶ್, ಅತಿಥಿ ಉಪನ್ಯಾಸಕಿ ಆಶಾ, ನಿವೃತ್ತ ಅತಿಥಿ ಉಪನ್ಯಾಸಕ ಶಿವೇಗೌಡ ಉಪಸ್ಥಿತರಿದ್ದರು.
