ಹೆಚ್.ಡಿ. ಕೋಟೆ, ಜನವರಿ 12, 2026 : ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್ ಮಾಲೀಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೊಸದೊಂದು ಅಕ್ರಮಕ್ಕೆ ಕೈಹಾಕಿದ್ದಾರೆ. ಈ ಭಾಗದಲ್ಲಿ ರಸ್ತೆ ಸಫಾರಿಯನ್ನು ಸರ್ಕಾರ ಅಧಿಕೃತವಾಗಿ ಬಂದ್ ಮಾಡಿದ್ದರೂ, ಅದಕ್ಕೆ ಪರ್ಯಾಯವಾಗಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಬೋಟ್ ಸಫಾರಿಯನ್ನು ಆರಂಭಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಿಂದೆ ಇದೇ ಭಾಗದಲ್ಲಿ ನಡೆದಿದ್ದ ಹುಲಿ ದಾಳಿಗಳು ಹಾಗೂ ಅಕ್ರಮ ರೆಸಾರ್ಟ್‌ಗಳ ಹಾವಳಿಯ ವರದಿಗಳನ್ನು ಆಧರಿಸಿ ರಾಜ್ಯ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಸಫಾರಿಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ವಿಶೇಷವೆಂದರೆ, ಸಫಾರಿ ನಿಲ್ಲಿಸಿದ ನಂತರ ಈ ಪ್ರದೇಶದಲ್ಲಿ ಹುಲಿ ದಾಳಿಗಳು ಮತ್ತು ಸಾರ್ವಜನಿಕರ ಸಾವುನೋವುಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಆದರೆ, ಇದೀಗ ಪ್ರವಾಸಿಗರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿರುವ ರೆಸಾರ್ಟ್ ಮಾಲೀಕರು, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಜಲಮಾರ್ಗದ ಮೂಲಕ ಸಫಾರಿ ದರ್ಬಾರ್ ಶುರು ಮಾಡಿದ್ದಾರೆ.

ಅಧಿಕಾರಿಗಳು ಒಂದು ಹೆಜ್ಜೆ ಮುಂದೆ ಹೋದರೆ, ರೆಸಾರ್ಟ್ ಮಾಲೀಕರು ಅವರಿಗಿಂತ ಎರಡೂ ಹೆಜ್ಜೆ ಮುಂದೆ ಹೋಗಿ ‘ರಂಗೋಲಿ ಕೆಳಗೆ ತೂರುವ’ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮಗಳು ಕಣ್ಣೆದುರೇ ನಡೆಯುತ್ತಿದ್ದರೂ ಕಬಿನಿ ಜಲಾನಯನ ಪ್ರದೇಶದ ಇಂಜಿನಿಯರ್‌ಗಳು ಮೌನಕ್ಕೆ ಶರಣಾಗಿರುವುದು ಮತ್ತು ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಈ ಬೋಟ್ ಸಫಾರಿಯಿಂದಾಗಿ ಮತ್ತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುವ ಭೀತಿ ಎದುರಾಗಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.
