ಶಬರಿಮಲೆ, ನವೆಂಬರ್ 26, 2025 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರೆಯಲೆಂದು ಹಾರೈಸಿ, ಅವರ ಅಭಿಮಾನಿಗಳು ಕೇರಳದ ಶಬರಿಮಲೆಯ ಅಯ್ಯಪ್ಪ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶಬರಿಮಲೆಗೆ ತೆರಳಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮರಡಿಹುಂಡಿ ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಈ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದ್ದಾರೆ.
ಮರಡಿಹುಂಡಿ ಗ್ರಾಮದಿಂದ ಯಾತ್ರೆಗೆ ತೆರಳಿರುವ ಸಿದ್ದರಾಮಯ್ಯನವರ ಅಭಿಮಾನಿಗಳು, ಅಯ್ಯಪ್ಪ ಮಾಲಾಧಾರಣೆ ಮಾಡಿದ್ದರು.ಇವರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಗಳನ್ನು ಹಿಡಿದು ಪವಿತ್ರವಾದ ಶಬರಿಮಲೆ ಬೆಟ್ಟ ಏರಿರುವುದು ಗಮನಾರ್ಹವಾಗಿತ್ತು.ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು, “ಸಿಎಂ ಸಿದ್ದರಾಮಯ್ಯನವರ ರಾಜಕೀಯ ಜೀವನ ಸುಗಮವಾಗಿರಲಿ, ಅವರಿಗೆ ಎದುರಾಗುವ ಎಲ್ಲ ಅಡೆತಡೆಗಳು ದೂರವಾಗಲಿ ಹಾಗೂ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಲಿ” ಎಂದು ಭಗವಂತನಲ್ಲಿ ಮೊರೆ ಇಟ್ಟರು.
