ನಂಜನಗೂಡು, ನವೆಂಬರ್ 22, 2025 : ತಾಲೂಕು ಪಂಚಾಯತಿ ಮಾಜಿ ಸದಸ್ಯನೊಬ್ಬ ರೌಡಿಸಂ ಪ್ರದರ್ಶಿಸಿದ್ದು, ಸ್ಮಶಾನ ಜಾಗದ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಕಂದಾಯ ಅಧಿಕಾರಿಗಳ ಮುಂದೆಯೇ ಸ್ಥಳೀಯರ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದ ಘಟನೆ ನಂಜನಗೂಡು ತಾಲ್ಲೂಕಿನ ಚಿಕ್ಕಕವಲಂದೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಕವಲಂದೆ ಗ್ರಾಮದಲ್ಲಿ ನಾಯಕ ಜನಾಂಗದ ಸ್ಮಶಾನಕ್ಕಾಗಿ 0.14 ಗುಂಟೆ ಜಮೀನು ಮಂಜೂರಾಗಿದ್ದು, ಜಾಗದ ಸರ್ವೇ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಸ್ಥಳೀಯರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಗ್ರಾಮ ಲೆಕ್ಕಾಧಿಕಾರಿ ಮೋನಿಕಾ ಹಾಗೂ ತಾಲ್ಲೂಕು ಸರ್ವೇಯರ್ ಜ್ಞಾನ ಸುಂದರ್ ಅವರು ಸರ್ವೇ ಕಾರ್ಯಕ್ಕೆ ಗ್ರಾಮಕ್ಕೆ ಆಗಮಿಸಿದ್ದರು.
ಸರ್ವೇ ಕಾರ್ಯಕ್ಕೆ ಮುಂದಾದ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ, ಚಿಕ್ಕಕವಲಂದೆ ಗ್ರಾಮದ ಮಹೇಂದ್ರ ಹಾಗೂ ಆತನ ಸಹಚರ ಸುಬ್ರಹ್ಮಣ್ಯ ಅವರು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದರು. ಈ ವೇಳೆ ಮಾಜಿ ಸದಸ್ಯ ಮಹೇಂದ್ರ ಅವರು ಅಧಿಕಾರಿಗಳ ಮುಂದೆಯೇ ಸ್ಥಳೀಯರಾದ ನಂಜನಾಯಕ ಮತ್ತು ಸಿದ್ದರಾಜು ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಅವರನ್ನು ಬೆನ್ನಟ್ಟಿಕೊಂಡು ಹೋಗಿ ಸೌದೆಯಿಂದಲೂ ಹಲ್ಲೆ ನಡೆಸಿ, ನಂತರ ಕಲ್ಲಿನಿಂದಲೂ ಹೊಡೆಯಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ದರ್ಪ ಮತ್ತು ದೂರು
ಮಾಜಿ ಸದಸ್ಯ ಮಹೇಂದ್ರ ಮತ್ತು ಸುಬ್ರಹ್ಮಣ್ಯ ಅವರು ಹಲ್ಲೆ ನಡೆಸಿರುವುದಲ್ಲದೆ, ಸ್ಥಳೀಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಗಲಾಟೆಯ ಹಿನ್ನೆಲೆಯಲ್ಲಿ ಸರ್ವೇಗೆ ಬಂದಿದ್ದ ಅಧಿಕಾರಿಗಳು ಕಾರ್ಯವನ್ನು ಮೊಟಕುಗೊಳಿಸಿ ವಾಪಸ್ ತೆರಳಿದ್ದಾರೆ.
ಹಲ್ಲೆಗೊಳಗಾದ ನಂಜನಾಯಕ ಮತ್ತು ಸಿದ್ದರಾಜು ಅವರು ದೊಡ್ಡಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಸದಸ್ಯ ಮಹೇಂದ್ರ ಹಾಗೂ ಸುಬ್ರಹ್ಮಣ್ಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ವಿಡಿಯೋ ವೈರಲ್ : ಮಾಜಿ ತಾ.ಪಂ. ಸದಸ್ಯ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
