ಮೈಸೂರು, ಡಿಸೆಂಬರ್ 2, 2025 : ಮೈಸೂರು ತಹಶೀಲ್ದಾರ್ ಮಹೇಶ್ ಅವರ ವಿರುದ್ಧ ಭೂ ಮಾಫಿಯಾಗಳಿಗೆ ಸಾಥ್ ನೀಡುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರು ತಾಲೂಕಿನ ದೊಡ್ಡ ಮಾರಗೌಡನಹಳ್ಳಿಯ ಸರ್ವೇ ನಂಬರ್ 121 ರ ನಾಲ್ಕು ಎಕರೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ, ಸುಮಾರು 80 ವರ್ಷಗಳಿಂದ ಭೂಮಿ ಮೇಲೆ ಹಕ್ಕನ್ನು ಹೊಂದಿರುವ ರೈತರ ಕುಟುಂಬವನ್ನು ಏಕಾಏಕಿ ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಜಮೀನು 1951 ರಲ್ಲಿ ಹರಾಜು ಮೂಲಕ ಸಣ್ಣೇಗೌಡ ಕುಟುಂಬಕ್ಕೆ ಬಂದಿತ್ತು. ಸಣ್ಣೇಗೌಡರ ಮರಣದ ನಂತರ, ಈ ಜಮೀನಿನ ಪೌತಿ ಖಾತೆಯನ್ನು ಅವರ ಕುಟುಂಬಸ್ಥರಾದ ಕೃಷ್ಣೇಗೌಡ, ಸಣ್ಣಮ್ಮ, ಯಶೋಧಮ್ಮ ಮತ್ತು ರವಿಕುಮಾರ್ ಜೆ ಅವರ ಹೆಸರಿಗೆ ಮಾಡಲಾಗಿತ್ತು. ಆದರೆ, ಇದೀಗ ತಹಶೀಲ್ದಾರ್ ಮಹೇಶ್ ಅವರು ಈ ಖಾತೆಯನ್ನು ಏಕಾಏಕಿ ರದ್ದುಪಡಿಸಿದ್ದಾರೆ ಎಂಬ ಆರೋಪವಿದೆ.
ಮಹೇಶ್ ಶ್ಯಾಮಣ್ಣ ಎಂಬುವವರು 2006 ರಲ್ಲಿ ಇದೇ ಸರ್ವೇ ನಂಬರ್ 121 ರಲ್ಲಿ ನಾಲ್ಕು ಎಕರೆ ಜಮೀನನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದು, ಕಳೆದ 25 ವರ್ಷಗಳಿಂದ ಭೂಮಿಯ ಕಡೆ ಸುಳಿಯದ ಇವರು ಈಗ ದಿಢೀರ್ ರೈತರ ಜಮೀನಿಗೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ತಹಶೀಲ್ದಾರ್ ಮಹೇಶ್ ಅವರು ರೈತರ ಪರ ನಿಲ್ಲದೇ ಉಳ್ಳವರ ಬೆನ್ನಿಗೆ ನಿಂತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಈ ಭೂ ವ್ಯಾಜ್ಯ ಸಿವಿಲ್ ಕೇಸ್ ಆಗಿದ್ದರೂ ಸಹ, ಕಾನೂನು ಬಾಹಿರವಾಗಿ ಪೊಲೀಸರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದಾರೆ. ರೈತರು ದಾಖಲೆಗಳನ್ನು ತೋರಿಸಿದರೂ ಸಹ, ತಹಶೀಲ್ದಾರ್ ಮತ್ತು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್ ಮಹೇಶ್ ಅವರೇ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದರೂ ಸಹ, ಇದೀಗ ಯಾವುದೇ ನೋಟಿಸ್ ನೀಡದೇ ಏಕಾಏಕಿ ಖಾತೆ ಕ್ಯಾನ್ಸಲ್ ಮಾಡಿರುವುದು ಅವರ ನಡೆಯ ಮೇಲೆ ಅನುಮಾನಗಳಿಗೆ ಎಡೆಮಾಡಿದೆ. ಅಕ್ರಮಕ್ಕೆ ಸಾಥ್ ಕೊಡಲು ತಹಶೀಲ್ದಾರ್ ಮುಂದಾಗಿದ್ದಾರೆ ಎಂದು ಆರೋಪಿಸಿರುವ ರೈತ ಕುಟುಂಬವು, ಅವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.
