ಬಿಹಾರ, ನವೆಂಬರ್ 10, 2025 : ಬಿಹಾರದಲ್ಲಿ ನಾಳೆ ಮಂಗಳವಾರ ಅಂತಿಮ ಹಂತದ ಮತದಾನ ನಡೆಯಲಿದ್ದು, ಭಾನುವಾರ ಸಂಜೆ ಎಲ್ಲಾ ಮಾದರಿಯ ಪ್ರಚಾರಕ್ಕೂ ತೆರೆಬಿದ್ದಿದೆ ಹಾಗೂ ವೋಟಿಂಗ್ ತೀವ್ರ ಕುತೂಹಲ ಕೆರಳಿಸಿದೆ.
ಮಂಗಳವಾರ ನಡೆಯಲಿರುವ ಎರಡನೇ ಹಂತದ ವೋಟಿಂಗ್ ನಲ್ಲಿ 122 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎನ್‌ಡಿಎ, ಇಂಡಿಯಾ ಮೈತ್ರಿಕೂಟದ ನಾಯಕರು ಸಾರ್ವಜನಿಕ ಸಭೆಗಳನ್ನು ನಡೆಸಿ ಮತದಾರರನ್ನು ಸೆಳೆಯಲು ಸರ್ಕಸ್ ನಡೆಸಿವೆ.
ಕಳೆದ ಕೆಲ ದಿನಗಳಿಂದ ಬಿಹಾರದಲ್ಲೇ ಬೀಡುಬಿಟ್ಟಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಸಸಾರಾಮ್ ಹಾಗೂ ಅರ್ವಾಲ್‌ಗಳಲ್ಲಿ ಬಿಜೆಪಿ ದೊಡ್ಡ ರ್ಯಾಲಿ ನಡೆಸಿ ಮತಬೇಟೆ ನಡೆಸಿದೆ.
5 ಅವಧಿಗೆ ಮುಖ್ಯಮಂತ್ರಿ ಹುದ್ದೆಯತ್ತ ಕಣ್ಣಿಟ್ಟಿರುವ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಕೂಡ ಭರ್ಜರಿ ಪ್ರಚಾರ ನಡೆಸಿದ್ದು, ಮತದಾರ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾನೆ.ಬಿಹಾರದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ. 243 ಸದಸ್ಯರ ಬಿಹಾರ ವಿಧಾನಸಭೆ ಎಲೆಕ್ಷನ್ ರಾಷ್ಟ್ರರಾಜಕಾರಣದಲ್ಲಿ ದೊಡ್ಡ ತಲ್ಲಣವನ್ನೇ ಸೃಷ್ಟಿಸಿದ್ದು, 1ನೇ ಹಂತದ ಮತದಾನದಲ್ಲಿ ಶೇ. 64.46ರಷ್ಟು ಮತದಾನ ದಾಖಲಾಗಿತ್ತು. ಮತ ಎಣಿಕೆ ನವೆಂಬರ್ 14ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
