ಸಂಸ್ಕೃತಿ ಸಾರಿದ ತಳಿಯತಕ್ಕಿ ಬೊಳ್ಚ, ದುಡಿಕೊಟ್ಟ್ ಪಾಟ್
ಸಣ್ಣುವಂಡ ಕಿಶೋರ್ ನಾಚಪ್ಪ ಬಾಳೆಲೆ
ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ವಿಜಯಲಕ್ಷ್ಮೀ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಗೆ ಭಾನುವಾರ ಸಂಭ್ರಮದ ಚಾಲನೆ ನೀಡಲಾಯಿತು.
ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿದರು. ಅರಮಣಮಾಡ ಕುಟುಂಬದ ಮಹಿಳೆ ಮತ್ತು ಹಿರಿಯರು, ತವರುಮನೆ ಹುಡುಗಿಯರು ಪ್ರತ್ಯೇಕವಾಗಿ ಬಣ್ಣ ಬಣ್ಣದ ಕೊಡವ ಸೀರೆ, ಪತ್ತಾಕ್, ಜೋಮಾಲೆ ತೊಟ್ಟು ಹೆಜ್ಜೆ ಹಾಕಿದರು.
ಪುರುಷರು ಕುಪ್ಯಚೇಲೆ, ಪೀಚೆಕತ್ತಿ, ಮಂಡೆತುಣಿಯೊಂದಿಗೆ ಪಾಲ್ಗೊಂಡರು. ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್ಚದೊಂದಿಗೆ ಸ್ವಾಗತಿಸಿಕೊಳ್ಳಲಾಯಿತು. ಎಜ್ಟಿ ಕ್ಲಬ್ ಸದಸ್ಯರು ಬೈಕ್ ಜಾಥಾ ನಡೆಸಿಕೊಟ್ಟರು. 20 ಕ್ಕೂ ಹೆಚ್ಚು ಬೈಕ್ಗಳು ಪಾಲ್ಗೊಂಡಿದ್ದವು.
ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಕೊಡವ ನೃತ್ಯದ ಮೂಲಕ ಸಾಂಸ್ಕೃತಿಕ ಮೆರಗು ನೀಡಿದರು. ಉಮ್ಮತ್ತಾಟ್, ಬೊಳಕಾಟ್, ಕೊಡವ ಆಟ್ ಗಮನ ಸೆಳೆಯಿತು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಅರಮಣಮಾಡ ಕುಟುಂಬ ಅಧ್ಯಕ್ಷ ಮುತ್ತು ಮುತ್ತಪ್ಪ ಅಕಾಡೆಮಿ ಧ್ವಜ ಮತ್ತು ಕುಟುಂಬ ಧ್ವಜಾರೋಹಣ ನೆರವೇರಿಸಿದರು.
ಸಭಾ ಕಾರ್ಯಕ್ರಮ: ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ಕೊಡವತಿಯರ ಸಂಖ್ಯೆ ಕಡಿಮೆ ಇರುವ ಕಾಲದಲ್ಲಿ ಮಹಿಳಾ ತಂಡಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಕೊಂಡಿರುವುದು ಮೆಚ್ಚುವ ವಿಚಾರ ಎಂದರು. ಕ್ರೀಡೆ ಹಾಗೂ ಸೇನೆ ಯಲ್ಲಿ ಹೆಚ್ಚಿನ ಹೆಸರು ಮಾಡುವ ಮೂಲಕ ಗುರುತಿಸಿಕೊಂಡಿದೆ. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಮುಂದಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತೆ ಪ್ರೇರಣೆ ಮುಖ್ಯ. ಕೊಡಗಿನ ಮಕ್ಕಳು ಹಾಕಿ, ಕ್ರಿಕೆಟ್, ಟೆನಿಸ್, ಬಾಕ್ಸ್ಯಿಂಗ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುತಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕರಿಯಾಗಿದೆ. ಹೋಬಳಿ ಮಟ್ಟದಲ್ಲಿ ಮೈದಾನ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಮೇಜರ್ ಜನರಲ್ (ನಿ) ಪಾರುವಂಗಡ ಎಂ. ಕಾರ್ಯಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದು ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಬೆಳವಣಿಗೆಗೆ ಸಹಕಾರಿಯಾಗಿದೆ. ಕೊಡವ ಕೌಟುಂಬಿಕ ಕ್ರೀಡೆಯ ಸಂದರ್ಭದಲ್ಲಿ ಒಟ್ಟಿಗೆ ಒಗ್ಗಟ್ಟಿನಲ್ಲಿ ಸೇರಲು ಅವಕಾಶ ಮಾಡಿಕೊಡುತ್ತದೆ. ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸಲು ಸಹಕಾರಿ ಎಂದರು.
ಕೊಡವ ಮಹಿಳಾ ಕ್ರಿಕೆಟ್ ರೂವಾರಿ ಐಚೇಟ್ಟಿರ ಸುನಿತಾ ಮಾತನಾಡಿ, ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರದೆ ಹೊರ ಬಂದು ಈ ಕ್ರಿಕೆಟ್ ಹಬ್ಬದಲ್ಲಿ ತಂಡದೊಂದಿಗೆ ಭಾಗವಹಿಸಿರುವುದು ವಿಶೇಷವಾಗಿದೆ. ಮಹಿಳೆ ಮುಂದಾಳತ್ವದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಕ್ತಿ, ದೃಡತೆ, ಸಮಾನತೆ, ಶಿಸ್ತು, ನಾಯಕತ್ವ ಗುಣಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಅವಕಾಶ ದೊರೆಯುತ್ತಿದೆ ಎಂದರು.
ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಅಂಜಪರವಂಡ ಬಿ. ಸುಬ್ಬಯ್ಯ, ಕೆ. ಎ. ಎಸ್. ಅಧಿಕಾರಿ ಚೊಟ್ಟೆಯಂಡಮಾಡ ಕೆ. ರಾಜೇಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ವಿಜಯಲಕ್ಷ್ಮೀ ಜೂನಿಯರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಕ್ಕಾಟೀರ ಜಾನಕ್ಕಿ ಕಾವೇರಪ್ಪ, ಅರಮಣಮಾಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಎ. ಕೆ. ಸುರೇಶ್, ಉಪಾಧ್ಯಕ್ಷ ಸುಗುಣ ಗಣಪತಿ, ಕಾರ್ಯದರ್ಶಿ ಎ. ಎ. ಅಜಯ್, ಖಜಾಂಚಿ ದಿನು ಬೆಳ್ಯಪ್ಪ, ಟೂರ್ನಿ ನಿರ್ದೇಶಕ ಕೊಕ್ಕೇಂಗಡ ರಂಜನ್ ಇದ್ದರು. ಅರಮಣಮಾಡ ಪ್ರಮೀಳ ಗಿರೀಶ್ ನಿರೂಪಿಸಿದರು.
ಫಲಿತಾಂಶ: ಅಜ್ಜಿಕುಟ್ಟೀರ ಮಹಿಳಾ ತಂಡ ಕಾಂಡೇರವನ್ನು 25 ರನ್ಗಳಿಂದ ಮಣಿಸಿತು. ಅಜ್ಜಿಕುಟ್ಟೀರ 2 ವಿಕೆಟ್ಗೆ 58 ರನ್ ದಾಖಲಿಸಿತು. ಕಾಂಡೇರ 1 ವಿಕೆಟ್ ನಷ್ಟಕ್ಕೆ ಕೇವಲ 32 ರನ್ ಸೇರಿಸಿತು. ಅಜ್ಜಿಕುಟ್ಟೀರ ಪವಿತ್ರ 24 ರನ್, ಪವಿತ್ರ ಪೂವಯ್ಯ 16, ಮಮತ 1 ವಿಕೆಟ್, ಕಾಂಡೇರ ಶ್ರುತಿ ಚಂಗಪ್ಪ 13 ರನ್, ಕುಸುಮಾ ಶೇಖರ್ 1 ವಿಕೆಟ್ ಪಡೆದರು.
ಅಳಮೇಂಗಡ ಚಿರಿಯಪಂಡವನ್ನು 47 ರನ್ಗಳಿಂದ ಮಣಿಸಿತು. ಅಳಮೇಂಗಡ ವಿಕೆಟ್ ನಷ್ಟವಿಲ್ಲದೆ 80 ರನ್ ದಾಖಲಿಸಿತು. ಚಿರಿಯಪಂಡ 3 ವಿಕೆಟ್ ನಷಟಕ್ಕೆ 33 ರನ್ ದಾಖಲಿಸಿತು. ಅಳಂಮೇಂಗಡ ಭವ್ಯ ದರ್ಶನ್ 24 ರನ್, ರಿನಿತಾ ದಿಲಿಪ್ 17 ರನ್ ಸೇರಿಸಿ ತಲಾ ಒಂದೊಂದು ವಿಕೆಟ್ ಪಡೆದರು. ಚಿರಿಯಪಂಡ ಶ್ರೇಯಾ ದೇಚಮ್ಮ 15 ರನ್ ಗಳಿಸಿದರು.
ಪ್ರದರ್ಶನ ಪಂದ್ಯದಲ್ಲಿ ಸೌತ್ ಕೂರ್ಗ್ ತಂಡವು ನಾರ್ತ್ ಕೂರ್ಗ್ ವಿರುದ್ದ ಸೂಪರ್ ಓವರ್ನಲ್ಲಿ ಜಯಿಸಿತು. ಸೌತ್ ತಂಡವು 5 ವಿಕೆಟ್ಗೆ 89 ರನ್ ಗಳಿಸಿತು. ನಾರ್ತ್ ತಂಡವು 6 ವಿಕೆಟ್ ಕಳೆದುಕೊಂಡು ಡ್ರಾ ಮಾಡಿಕೊಂಡಿತು. ಸೂಪರ್ ಓವರ್ನಲ್ಲಿ ಸೌತ್ ತಂಡವು 8 ರನ್ಗಳನ್ನು ಬೆನ್ನತ್ತಿ ಗೆಲುವಿನ ನಗೆ ಬೀರಿತು. ಸೌತ್ ಪರ ಅಚ್ಚಪಂಡ ಅಯ್ಯಪ್ಪ 27 ರನ್, ಮಾಚಂಗಡ ದರ್ಶನ್ 26, ಚೆಕ್ಕೇರ ಕಾರ್ಯಪ್ಪ 20 ರನ್ ಪೇರಿಸಿದರು. ಹಂಚೇಟೀರ ಸೋಮಣ್ಣ 2, ನಿಕಿತ್ 1, ತಂಬುಕುತ್ತಿರ ಸುರೇಶ್ 1 ವಿಕೆಟ್ ಪಡೆದರು. ನಾರ್ತ್ ಪರ ಅಜ್ಜೇಟೀರ ಸೋಮಯ್ಯ 34, ಕೈಬಿಲೀರ ರೋಹಿತ್ 30, ಕುಟ್ಟಂಡ ಕುಟಪ್ಪ 20 ರನ್, ಶರತ್ 3 ವಿಕೆಟ್, ಮಚ್ಚಮಾಡ ರೋಶನ್ 3 ವಿಕೆಟ್ ಪಡೆದರು.
ಇಂದಿನ ಪಂದ್ಯಗಳು
(ಪುರುಷ) ಮೈದಾನ – 1
9. ಮಾಚೇಟ್ಟೀರ (ಬಾಳುಗೋಡು) – ಕಂಜಿತಂಡ
10 ; ಕಳ್ಳಿಚಂಡ – ನಾಟೋಳಂಡ
11 ; ಚಿರಿಯಪಂಡ – ಮುಕ್ಕಾಟೀರ
12 ; ಆಪಟ್ಟೀರ – ಮಿನ್ನಂಡ
1 ; ಬೊಟ್ಟಂಗಡ – ಬೊಳಕಾರಂಡ
3 ; ಕಾಳಿಮಾಡ – ಸರ್ಕಂಡ
4 ; ಬಯವಂಡ – ಕೋದೇಂಗಡ
(ಮಹಿಳೆ) ಮೈದಾನ – 2
ಮ. 1 ; ನಾಟೋಳಂಡ – ಕೊಟ್ಟಂಗಡ
2 ; ಮಾಪಣಮಾಡ – ಅಣ್ಣಳಮಾಡ
3 ; ಕೇಲೇಟೀರ – ಚೆಕ್ಕೇರ
4 ; ಚೇಂದೀರ – ಆದೇಂಗಡ
ಫೋಟೋ 21 ಜಿಕೆಪಿ 01 ; ಬಾಳೆಲೆ ವಿಜಯಲಕ್ಷ್ಮೀ ಕಾಲೇಜು ಮೈದಾನದಲ್ಲಿ ಅರಮಣಮಾಡ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಲಾಯಿತು.
02 ; ಸಾಂಸ್ಕೃತಿಕ ಮೆರವಣಿಗೆ
03 ; ಧ್ವಜಾರೋಹಣ
04 ; ಬೈಕ್ ಜಾಥಾ
05 ; ಕೊಡವ ನೃತ್ಯ