ಮೈಸೂರು, ನವೆಂಬರ್ 25, 2025 :ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂವಿಧಾನ ದಿನಾಚರಣೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ಸಂವಿಧಾನಕ್ಕೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಸಂವಿಧಾನ ದಿನಾಚರಣೆ: ನಾಳೆಯಿಂದ ಡಿ. 6ರವರೆಗೆ ಆಚರಣೆ
ಭಾರತೀಯ ಜನತಾ ಪಕ್ಷದ (ಬಿಜೆಪಿ) ವತಿಯಿಂದ ನಾಳೆಯಿಂದ ಡಿಸೆಂಬರ್ 6 ರವರೆಗೆ ದೇಶಾದ್ಯಂತ ಸಂವಿಧಾನ ದಿನಾಚರಣೆ ಹಾಗೂ ಅಂಬೇಡ್ಕರ್ ಅವರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಸಂವಿಧಾನ ದಿನಾಚರಣೆಗೆ ಮುಂದಾಗಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ: ‘ಸಂವಿಧಾನಕ್ಕೆ ಮೋಸ ಮಾಡಿದ್ದು ಕಾಂಗ್ರೆಸ್’
ಬಿಜೆಪಿ ಸಂವಿಧಾನ ವಿರೋಧಿ, ಮೀಸಲಾತಿ ವಿರೋಧಿ, ದಲಿತ ವಿರೋಧಿ ಎಂದು ಕಾಂಗ್ರೆಸ್ ಪಕ್ಷವು ಸುಳ್ಳು ಬಿಂಬಿಸುತ್ತಿತ್ತು. ಆದರೆ, ಸಂವಿಧಾನಕ್ಕೆ ಮೋಸ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಎಂದು ಅವರು ಗಂಭೀರ ಆರೋಪ ಮಾಡಿದರು. 1975-76 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ, ಸುಮಾರು ಎರಡು ವರ್ಷಗಳ ಕಾಲ ಸಂವಿಧಾನವೇ ಇಲ್ಲದಂತೆ ಮಾಡಿದವರು ಕಾಂಗ್ರೆಸ್‌ನವರು. ಈಗ ಸಂವಿಧಾನವನ್ನು ಗಟ್ಟಿ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರು” ಎಂದು ನಾರಾಯಣಸ್ವಾಮಿ ಹೇಳಿದರು.
ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್‌ಗೆ ಟಾಂಗ್
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಮೊದಲ ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಒಂದು ಸುಡುವ ಮನೆಯಿದ್ದಂತೆ” ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದರು.ಅಂಬೇಡ್ಕರ್ ಅವರಿಗೆ ಗೌರವ ಕೊಡುವುದನ್ನು ಬಿಜೆಪಿ ಪಕ್ಷವನ್ನು ನೋಡಿ ಕಾಂಗ್ರೆಸ್ ಕಲಿಯಬೇಕು. ಬಹು ದಿನಗಳ ಕಾಲ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಕೂಡ ಹಾಕುತ್ತಿರಲಿಲ್ಲ. “ದಲಿತ ಸಮುದಾಯದ ಓಟು ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನಂತರ ಕಚೇರಿಯಲ್ಲಿ ಅಂಬೇಡ್ಕರ್ ಅವರ ಪೊಟೋ ಹಾಕಿದರು ಎಂದು ಟೀಕಿಸಿದರು.
