ಬೆಂಗಳೂರು, ನವೆಂಬರ್ 29, 2025 : ರಾಜ್ಯದಲ್ಲಿ ಚಳಿ ವಾತಾವರಣ ಹೆಚ್ಚಾಗಿದ್ದು, ದಟ್ಟವಾದ ಮಂಜು ಎಲ್ಲೆಡೆ ವ್ಯಾಪಿಸಿದೆ. ಇದೀಗ ಚಳಿ ಜತೆ ಮಳೆಯೂ ಸುರಿಯಲಿದೆ ಎಂಬ ಅಪ್ಡೇಟ್ ದೊರೆತಿದೆ.
ಇವತ್ತು ನ.29ರಿಂದ ಡಿ.2ರವರೆಗೆ ಮಿಶ್ರ ವಾತಾವರಣ ಇರಲಿದ್ದು, ಚಳಿ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯ ಚಂಡಮಾರುತದ ಪ್ರಭಾವದಿಂದ ಬೆಂಗಳೂರು, ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಉತ್ತರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇಲಾಖೆಯ ವರದಿ ಪ್ರಕಾರ ತಾಪಮಾನ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸುಧಾರಿಸಿದೆ ಎಂದು ಹೇಳಲಾಗಿದೆ.
ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳ ಕೆಲವು ಪ್ರದೇಶದಲ್ಲಿ ಚಂಡಮಾರುತದ ಪ್ರಭಾವದಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಉತ್ತರ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿ ಚಳಿಯ ಪ್ರಭಾವ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಇನ್ನೂ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಂಗಳೂರಿನ ಕೆಲವೊಂದು ಕಡೆ ರೆಡ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಡಿ 1ರಂದು ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ ಮತ್ತು ವಿಜಯಪುರ ಸೇರಿದಂತೆ ಬಹುತೇಕ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ವಾತಾವರಣ ಇರಲಿದೆ. ಡಿಸೆಂಬರ್ ಮೊದಲ ವಾರದಿಂದ ಚಳಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
