ಮೈಸೂರು, ನವೆಂಬರ್ 24, 2025 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ” ಎಂದು ಪದೇ ಪದೇ ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಅವರಿಗೆ ಬರಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಇದೀಗ ರೆಬೆಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಶುರುವಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ಅವರ ಗಟ್ಟಿತನದ ಬಗ್ಗೆ ಮಾತನಾಡಿದ ಬೊಮ್ಮಾಯಿ, “ನಾವು ನೋಡಿದ ಸಿದ್ದರಾಮಯ್ಯ ಮೊದಲಿನಿಂದಲೂ ರೆಬೆಲಿಯನ್ (ಬಂಡಾಯಗಾರ). ಅವರದ್ದು ಯಾವಾಗಲೂ ಗಟ್ಟಿ ಗಡಸುತನದ ರಾಜಕಾರಣ. ಅದೇ ಅವರ ಮೂಲ ವ್ಯಕ್ತಿತ್ವ” ಎಂದು ವಿಶ್ಲೇಷಿಸಿದ್ದಾರೆ.
ರೆಬೆಲಿಯನ್ ಸಿದ್ದರಾಮಯ್ಯ ಆಗಿದ್ದರೆ, ಅವರು ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡುವುದಿಲ್ಲ.ಕಾಂಪ್ರಮೈಸ್ ಸಿದ್ದರಾಮಯ್ಯ ಆಗಿದ್ದರೆ, ಅವರು ಅಧಿಕಾರ ಬಿಟ್ಟುಕೊಡಲು ಸಿದ್ಧರಾಗುತ್ತಾರೆ. ಸಿದ್ದರಾಮಯ್ಯರಂತಹ ವ್ಯಕ್ತಿತ್ವಕ್ಕೆ ಪ್ರತಿದಿನ ನಾನೇ ಸಿಎಂ ಎಂದು ಹೇಳುವ ದೈನೇಸಿ ಸ್ಥಿತಿ ಬರಬಾರದಿತ್ತು. ಈಗ ಅಧಿಕಾರದ ಆಸೆಗಾಗಿ ಅವರು ಬದಲಾಗಿದ್ದಾರೆಯೇ ಎಂಬುದು ಗೊತ್ತಾಗಬೇಕು. ಸಿದ್ದರಾಮಯ್ಯ ಅವರು ಎಷ್ಟರ ಮಟ್ಟಿಗೆ ತಮ್ಮ ಗಟ್ಟಿತನ ಉಳಿಸಿಕೊಂಡಿದ್ದಾರೆ ಎಂಬುದು ಈ ತಿಂಗಳಿನಲ್ಲಿ ಗೊತ್ತಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
