ಮೈಸೂರು, ಡಿಸೆಂಬರ್ 30, 2025 : ಸಾಂಸ್ಕೃತಿಕ ನಗರಿ ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಹಿಂಭಾಗದ ಕೆ.ಆರ್. ವನಂ ಬಡಾವಣೆಯಲ್ಲಿ ಗೋ ಸೇವೆಯ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಮುದ್ದಾದ ಎರಡು ಕರುಗಳಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸುವ ಮೂಲಕ ಗೋವುಗಳ ಮೇಲಿರುವ ತಮ್ಮ ಮಮಕಾರವನ್ನು ಮೈಸೂರಿನ ಕುಟುಂಬವೊಂದರಲ್ಲಿ ಮೆರೆದಿದ್ದಾರೆ.
ಇಲ್ಲಿನ ಮಧುಸೂದನ ತಾತಾಚಾರ್ಯ ಮತ್ತು ಅವರ ಕುಟುಂಬದವರು ಕಳೆದ ಮೂರು ವರ್ಷಗಳಿಂದ ಆಂಧ್ರಪ್ರದೇಶ ಮೂಲದ ವಿಶ್ವವಿಖ್ಯಾತ ‘ಪುಂಗನೂರು’ ತಳಿಯ ದೇಸಿ ಹಸುಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದಾರೆ. ವಿಶೇಷವೆಂದರೆ, ತಮ್ಮ ಮನೆಯ ಕಾರ್ ಶೆಡ್ ಅನ್ನು ಗೋವುಗಳ ವಾಸಕ್ಕೆ ಅನುಗುಣವಾಗಿ ‘ಕೌ ಶೆಡ್’ ಆಗಿ ಪರಿವರ್ತಿಸಿರುವ ಇವರು, ಅಲ್ಲಿ ಸಿರಿ, ನಿಧಿ, ಸಿಹಿ ಎಂಬ ಮೂರು ಹಸುಗಳು ಹಾಗೂ ಸಿರಿಯ ಮಗಳಾದ ಭುವಿ ಮತ್ತು ನಿಧಿಯ ಮಗಳಾದ ಸ್ವಾತಿ ಎಂಬ ಎರಡು ಕರುಗಳನ್ನು ಪೋಷಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಕುಟುಂಬವು ತಮ್ಮ ಮನೆಯ ಎರಡು ಕರುಗಳಿಗೆ ಶಾಸ್ತ್ರೋಕ್ತವಾಗಿ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸುವ ಮೂಲಕ ಗೋವುಗಳ ಮೇಲಿರುವ ತಮ್ಮ ಮಮಕಾರವನ್ನು ಮೆರೆದಿದ್ದಾರೆ.
ಮನೆಯ ಮಕ್ಕಳಂತೆ, ಕುಟುಂಬದ ಸದಸ್ಯರಂತೆ ಹಸುಗಳನ್ನು ಸಾಕುವ ವಿಶಿಷ್ಟ ಸಂಸ್ಕೃತಿಯನ್ನು ಮಧುಸೂದನ ತಾತಾಚಾರ್ಯ ಅವರ ಕುಟುಂಬ ಪಾಲಿಸಿಕೊಂಡು ಬರುತ್ತಿದೆ. ಮಾತೃ ಸ್ವರೂಪವಾದ ಹಾಗೂ ಮುಕ್ಕೋಟಿ ದೇವತೆಗಳ ವಾಸಸ್ಥಾನವೆಂದು ನಂಬಲಾದ ಗೋವುಗಳ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವ ಇವರು, ಬಂಧುಗಳು, ಸ್ನೇಹಿತರು ಮತ್ತು ಗೋಭಕ್ತರ ಸಹಕಾರದೊಂದಿಗೆ ‘ಹರಿ ಬ್ರಹ್ಮ ಗೋ ಸೇವಾ ಟ್ರಸ್ಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಟ್ರಸ್ಟ್ ಮೂಲಕ ಕಳೆದ 10 ವರ್ಷಗಳಿಂದ ತಲಕಾಡಿನ ಹೊಸಬೀದಿಯಲ್ಲಿರುವ ತಮ್ಮ ಪೂರ್ವಿಕರ ಮನೆಯಲ್ಲಿ ಸುಸಜ್ಜಿತ ಗೋಶಾಲೆಯನ್ನು ನಡೆಸುತ್ತಿದ್ದು, ಅಲ್ಲಿ ಒಂಗೋಲ್, ತಾರ್ ಪಾರ್ಕರ್, ಗೀರ್, ಬರಗೂರು ಮತ್ತು ಸಾಹಿವಾಲ್‌ನಂತಹ ವಿಶಿಷ್ಟ ದೇಸಿ ತಳಿಗಳನ್ನು ಸಂರಕ್ಷಿಸಿ ಬೆಳೆಸಲಾಗುತ್ತಿದೆ.
ದೇಸಿ ಗೋವುಗಳು ಕೇವಲ ಉತ್ಕೃಷ್ಟ ಗುಣಮಟ್ಟದ ಹಾಲನ್ನು ನೀಡುವುದಲ್ಲದೆ, ಮನೆಯಲ್ಲಿ ಆರೋಗ್ಯಕರ ಮತ್ತು ಸ್ನೇಹಮಯ ವಾತಾವರಣವನ್ನು ನಿರ್ಮಿಸುತ್ತವೆ. ಮಕ್ಕಳಂತೆ ಆಡುವ ಮತ್ತು ತಾಯಿಯಂತೆ ಕಾಯುವ ಈ ಸುಂದರ ಭಾರತೀಯ ತಳಿಗಳು ಇಂದು ಮನುಕುಲದ ನಿರ್ಲಕ್ಷ್ಯದಿಂದಾಗಿ ಅಳಿವಿನ ಅಂಚಿಗೆ ತಲುಪಿರುವುದು ವಿಷಾದನೀಯ ಸಂಗತಿಯಾಗಿದೆ. ಕೇವಲ ಹಣ ಸಂಪಾದನೆ ಅಥವಾ ಹಾಲಿನ ಉತ್ಪಾದನೆಯನ್ನೇ ಗುರಿಯಾಗಿಸಿಕೊಳ್ಳದೆ, ಪ್ರತಿಯೊಬ್ಬರೂ ದೇಸಿ ಗೋವುಗಳನ್ನು ಸಾಕುವ ಅಥವಾ ಗೋಶಾಲೆಗಳಿಗೆ ಬೆಂಬಲ ನೀಡುವ ಜವಾಬ್ದಾರಿಯನ್ನು ಹೊರಬೇಕಿದೆ. ನಮ್ಮ ದೇಶದ ಅಮೂಲ್ಯ ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂಬ ಸಂದೇಶವನ್ನು ಈ ಕುಟುಂಬ ಸಾರುತ್ತಿದೆ.
