ಮೈಸೂರು, ನ.9: ಮೈಸೂರು ಬಿಜೆಪಿ ಒಳರಾಜಕೀಯದ ನಡುವಿನ ಜಗಳಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ಬೆಂಬಲಿಗರ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಮಾವೇಶದ ವೇದಿಕೆಯಲ್ಲಿ ಪ್ರತಾಪ್ ಸಿಂಹ ಹೆಸರು ಬಿಟ್ಟಿದ್ದಕ್ಕೆ ಗಲಾಟೆ ಮಾಡಿದ ಕಾರ್ಯಕರ್ತ ರಾಜಾಚಾರಿಗೆ ಕೊಲೆ ಬೆದರಿಕೆ ಹಾಕಿ, ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳೆದ ನವೆಂಬರ್ 6 ರಂದು ಮೈಸೂರಿನ ಟೌನ್ಹಾಲ್ ಆವರಣದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ನಾಯಕರ ಸಮ್ಮುಖದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸ್ವಾಗತ ಭಾಷಣದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಇದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತ ಡಿ.ಎಲ್. ರಾಜಾಚಾರಿ ವೇದಿಕೆ ಮುಂಭಾಗಕ್ಕೆ ಧಾವಿಸಿ, ಪ್ರತಾಪ್ ಸಿಂಹ ಅವರ ಹೆಸರನ್ನು ಹೇಳುವಂತೆ ಬಹಿರಂಗವಾಗಿ ಗಲಾಟೆ ನಡೆಸಿದರು. ತಕ್ಷಣವೇ ಪೊಲೀಸರು ರಾಜಾಚಾರಿಯನ್ನು ವೇದಿಕೆಯ ಆವರಣದಿಂದ ಹೊರಗೆ ಕಳುಹಿಸಿದ್ದರು.
