ಮದ್ದೂರು : ಮದ್ದೂರಿನಲ್ಲಿ ಬುಧವಾರ ನಡೆದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ಜಾಮಿಯಾ ಮಸೀದಿ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಕೆಲಕಾಲ ಪೊಲೀಸರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ಮತ್ತು ಹೈಡ್ರಾಮಾ ನಡೆಯಿತು. ಆದಾಗ್ಯೂ, ಪೊಲೀಸರ ವಿರೋಧದ ನಡುವೆಯೂ ಯುವಕರು ಮಸೀದಿ ಮುಂಭಾಗದಲ್ಲೇ ಪಟಾಕಿ ಸಿಡಿಸಿ, ವಂದೇ ಮಾತರಂ ಹಾಡಿಗೆ ಕುಣಿದು ಕುಪ್ಪಳಿಸಿ ಮುಂದೆ ಸಾಗಿದರು.
ಮೆರವಣಿಗೆಯು ಮಸೀದಿ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ, ಯುವಕರು ಪಟಾಕಿ ಸಿಡಿಸಲು ಮುಂದಾದರು. ಭದ್ರತಾ ದೃಷ್ಟಿಯಿಂದ ಪೊಲೀಸರು ಪಟಾಕಿಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ ಆಕ್ರೋಶಗೊಂಡ ಕಾರ್ಯಕರ್ತರು, ರಸ್ತೆಯಲ್ಲೇ ಕುಳಿತು ‘ವಂದೇ ಮಾತರಂ’ ಹಾಗೂ ಜೈಕಾರಗಳ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ಮಂಡ್ಯ ಎಸ್ಪಿ ಶೋಭಾರಾಣಿ ಅವರು ತಕ್ಷಣವೇ ಮಧ್ಯಪ್ರವೇಶಿಸಿ, ರಸ್ತೆಯಲ್ಲಿ ಕುಳಿತಿದ್ದ ಕಾರ್ಯಕರ್ತರ ಮನವೊಲಿಸುವಲ್ಲಿ ಯಶಸ್ವಿಯಾದರು.
ಸಣ್ಣಪುಟ್ಟ ಗೊಂದಲ ಹಾಗೂ ಜಟಾಪಟಿಗಳನ್ನು ಹೊರತುಪಡಿಸಿ, ಜಾಮಿಯಾ ಮಸೀದಿ ಮುಂಭಾಗ ಗಣೇಶನ ಮೆರವಣಿಗೆಯನ್ನು ಪೊಲೀಸರು ಸಂಪೂರ್ಣ ಶಾಂತಿಯುತವಾಗಿ ನಡೆಸಿಕೊಟ್ಟರು. ಮಸೀದಿ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ವಹಿಸಲಾಗಿತ್ತು. ಎಲ್ಲಾ ಗಣೇಶನ ಮೂರ್ತಿಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟ ಬಳಿಕ, ಸ್ಥಳದಲ್ಲಿದ್ದ ಜನರನ್ನು ಪೊಲೀಸರು ತೆರವುಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
