ನಂಜನಗೂಡು, ನವೆಂಬರ್ 10, 2025 : ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದ ಪತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಇಂದಿರಾ ಗ್ರಾಮದಲ್ಲಿ ನಡೆದಿದೆ. ಪತಿಯನ್ನು ಪತ್ನಿಯೇ ಮರ್ಮಾಂಗ ಹಿಸುಕಿ ಕೊಲೆ ಮಾಡಿ, ನಂತರ ಆ ಕೃತ್ಯವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಮೃತ ದುರ್ದೈವಿಯನ್ನು ಇಂದಿರಾ ಗ್ರಾಮದ ವೀರಣ್ಣ (41) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶಿವಮ್ಮ (35) ಅವರನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

13 ವರ್ಷಗಳ ಹಿಂದೆ ವೀರಣ್ಣ ಮತ್ತು ಶಿವಮ್ಮ ವಿವಾಹವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಶಿವಮ್ಮ ಕಳೆದ ನಾಲ್ಕು ವರ್ಷಗಳಿಂದ ಹೆಚ್.ಡಿ.ಕೋಟೆಯ ಬಲರಾಮ ಎಂಬಾತನೊಂದಿಗೆ ಪರಿಚಯ ಬೆಳೆಸಿದ್ದು, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಈ ಸಂಬಂಧದ ವಿಚಾರ ಪತಿ ವೀರಣ್ಣಗೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಕುರಿತು ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಸಹ ನಡೆದಿತ್ತು. ಹಲವು ಬಾರಿ ಬುದ್ಧಿ ಹೇಳಿದರೂ, ಶಿವಮ್ಮ ಮತ್ತು ಬಲರಾಮ್ ನಡುವಿನ ಸಂಬಂಧ ಮುಂದುವರೆದಿತ್ತು.
ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ
ನಿನ್ನೆ ರಾತ್ರಿ ಬಲರಾಮ್‌ನಿಂದ ಶಿವಮ್ಮಗೆ ಕರೆ ಬಂದಿದ್ದು, ಈ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿದೆ. ರಾತ್ರಿ ಊಟ ಮಾಡಿ ವೀರಣ್ಣ ಮಲಗಿದ ಬಳಿಕ, ಕೆಲವೇ ಸಮಯದಲ್ಲಿ ಶಿವಮ್ಮ ಬಾಯಿ ಬಡಿದುಕೊಂಡು ಮನೆಯಿಂದ ಹೊರಬಂದಿದ್ದಾಳೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗ್ರಾಮಸ್ಥರಿಗೆ ತಿಳಿಸಿದ್ದಾಳೆ.
ಸ್ಥಳಕ್ಕೆ ಆಗಮಿಸಿದ ಹುಲ್ಲಹಳ್ಳಿ ಠಾಣೆ ಪೊಲೀಸರು ಪರಿಶೀಲಿಸಿದಾಗ, ವೀರಣ್ಣ ಅವರ ಕುತ್ತಿಗೆಯಲ್ಲಿ ಸೀರೆಯ ಕುಣಿಕೆ ಕಂಡುಬಂದಿದೆ. ಅನುಮಾನಗೊಂಡ ಪೊಲೀಸರು ಶಿವಮ್ಮಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆಕೆಯು ಬಲರಾಮ್‌ನೊಂದಿಗಿನ ಸಂಬಂಧದ ಕುರಿತು ಬಾಯ್ಬಿಟ್ಟಿದ್ದಾಳೆ.
ಪೊಲೀಸರ ತನಿಖೆಯ ವೇಳೆ, ಶಿವಮ್ಮ ಪತಿಯ ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯದ ಬಳಿಕ, ಪತಿಯ ಮೃತದೇಹವನ್ನು ನೇಣಿನ ಕುಣಿಕೆಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಆರೋಪಿ ಶಿವಮ್ಮಳನ್ನು ವಶಕ್ಕೆ ಪಡೆದಿರುವ ಹುಲ್ಲಹಳ್ಳಿ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
