ಬೆಂಗಳೂರು, ಜನವರಿ 2, 2025 : ಮಾಗಡಿ ಸಮೀಪ 17 ವರ್ಷದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಶಿರಾದ ‘ಆರ್‌ಜೆ ಡಿಜಿಟಲ್ ನ್ಯೂಸ್’ ಯೂಟ್ಯೂಬ್ ಚಾನೆಲ್ ನಡೆಸುವ ರವಿ ಜಮುನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 31ರ ತಡರಾತ್ರಿ ಬಾಲಕಿ ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ದಾರಿ ಕೇಳುವ ನೆಪದಲ್ಲಿ ಬಂದ ಆರೋಪಿಗಳು ಅವಳನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ರವಿ ಬಾಲಕಿಗೆ ಕಿರುಕುಳ ನೀಡಿ ಬೆದರಿಸಿದ್ದಾನೆ ಎನ್ನಲಾಗಿದೆ. ಮಾಗಡಿ ಬಳಿ ಕಾರು ನಿಲ್ಲಿಸಿದಾಗ, ಬಾಲಕಿ ಆರೋಪಿಯ ಮೊಬೈಲ್‌ನಿಂದಲೇ ತನ್ನ ಸೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ರವಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ರವಿ, ಆತನ ಸ್ನೇಹಿತ ಹಾಗೂ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ರವಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ.
