ಬೆಳಗಾವಿ, ಡಿಸೆಂಬರ್ 17, 2025 : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಇಂದು ಸುವರ್ಣಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ರಾಜ್ಯ ಕಾಂಗ್ರೆಸ್ ಘಟಕದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯವು (Trial Court) ಸಾರಾಸಗಟಾಗಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಇದನ್ನು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

-
ಅಧಿಕಾರ ದುರುಪಯೋಗಕ್ಕೆ ಖಂಡನೆ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರತಿಪಕ್ಷದ ನಾಯಕರನ್ನು ಹಣಿಯಲು ಜಾರಿ ನಿರ್ದೇಶನಾಲಯದಂತಹ ಸ್ವಾಯತ್ತ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಆದರೆ ಸತ್ಯಕ್ಕೆ ಜಯ ಸಿಕ್ಕಿದೆ, ನ್ಯಾಯಾಲಯದ ತೀರ್ಮಾನವು ಬಿಜೆಪಿಯ ರಾಜಕೀಯ ಪ್ರೇರಿತ ಪಿತೂರಿಗೆ ಕನ್ನಡಿ ಹಿಡಿದಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
-
ನ್ಯಾಯಾಲಯದ ತೀರ್ಮಾನಕ್ಕೆ ಬೆಂಬಲ: ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯವು ಅದನ್ನು ತಿರಸ್ಕರಿಸಿರುವುದನ್ನು ಕಾಂಗ್ರೆಸ್ ನಾಯಕರು ಮುಕ್ತವಾಗಿ ಶ್ಲಾಘಿಸಿದರು. ಇದು ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
-
ಒಗ್ಗಟ್ಟು ಪ್ರದರ್ಶಿಸಿದ ಕೈ ನಾಯಕರು: ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಪುಟದ ಎಲ್ಲಾ ಸಚಿವರುಗಳು ಹಾಗೂ ಶಾಸಕರುಗಳು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸುವರ್ಣಸೌಧದ ಗಾಂಧಿ ಪ್ರತಿಮೆಯ ಎದುರು ಜಮಾಯಿಸಿದ ನಾಯಕರು, ಕೈಯಲ್ಲಿ ಬಿತ್ತಿಪತ್ರಗಳನ್ನು ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಈ ನ್ಯಾಯಾಲಯದ ತೀರ್ಪು ತಕ್ಕ ಪಾಠವಾಗಿದೆ ಎಂದು ನಾಯಕರು ಈ ಸಂದರ್ಭದಲ್ಲಿ ಹೇಳಿದರು.
