ಮೈಸೂರು, ಏಪ್ರಿಲ್ 28, 2026 : ಮೈಸೂರು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಲಿತಾದ್ರಿಪುರ ಗ್ರಾಮದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪುತ್ಥಳಿಯನ್ನು ಅನಾವರಣಗೊಳಿಸಿ, ಆಶೀರ್ವಚನ ನೀಡಿದರು. ಲಲಿತಾದ್ರಿಪುರದ ಶ್ರೀ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘವು ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಿಶ್ವಗುರು ಕೆಂಪೇಗೌಡರ ದೂರದೃಷ್ಟಿ: ಶ್ರೀಗಳ ನುಡಿ
ಪುತ್ಥಳಿ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ, ಅವರು ಇಡೀ ಮನುಕುಲದ ಉದ್ದಾರಕರು ಎಂದು ಬಣ್ಣಿಸಿದರು. ಕೆಂಪೇಗೌಡರ ಆಳ್ವಿಕೆಯ ಕಾಲದಲ್ಲಿ ಭಾರತದ ಜಿಡಿಪಿ ಜಗತ್ತಿನ ಒಟ್ಟು ಮೊತ್ತದ ಶೇ. 25 ರಷ್ಟಿತ್ತು ಎಂಬ ಐತಿಹಾಸಿಕ ವಿಚಾರವನ್ನು ಸ್ಮರಿಸಿದ ಅವರು, ಕೌಶಲ್ಯ ಆಧಾರಿತ ಆಡಳಿತ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ ಮಾದರಿಯನ್ನು ವಿವರಿಸಿದರು.
ಗಮನ ಸೆಳೆದ ಜೆಡಿಎಸ್ ನಾಯಕರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಮುಖ ಆಕರ್ಷಣೆಯಾಗಿದ್ದರು. ಶಾಸಕರಾದ ಜಿ.ಡಿ. ಹರೀಶ್ ಗೌಡ, ಕೆ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ ಹಾಗೂ ಮಾಜಿ ಶಾಸಕರಾದ ಸಾ.ರಾ. ಮಹೇಶ್, ಅಶ್ವಿನ್ ಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಆದರೆ, ಹಿರಿಯ ಶಾಸಕ ಜಿ.ಟಿ. ದೇವೇಗೌಡರ ಗೈರುಹಾಜರಿ ರಾಜಕೀಯ ವಲಯದಲ್ಲಿ ವಿಶೇಷ ಚರ್ಚೆಗೆ ಕಾರಣವಾಯಿತು.
-
ನಿಖಿಲ್ ಕುಮಾರಸ್ವಾಮಿ: “ಕೆಂಪೇಗೌಡರು ಹಾಕಿಕೊಟ್ಟ ಸೇವಾ ಮನೋಭಾವದ ಹಾದಿಯಲ್ಲಿ ನಾವು ಸಾಗಬೇಕು. ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿ ಮುಖ್ಯ. ಲಲಿತಾದ್ರಿಪುರದಲ್ಲಿ ನೆನೆಗುದಿಗೆ ಬಿದ್ದಿರುವ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಬದ್ಧನಿದ್ದೇನೆ” ಎಂದು ಭರವಸೆ ನೀಡಿದರು.
-
ಜಿ.ಡಿ. ಹರೀಶ್ ಗೌಡ (ಹುಣಸೂರು ಶಾಸಕ): “ಯಾರ ಬಳಿಯೂ ಹಣ ಕೇಳದೆ ಗ್ರಾಮಸ್ಥರೇ ಸೇರಿ ಪ್ರತಿಮೆ ಸ್ಥಾಪಿಸಿರುವುದು ಶ್ಲಾಘನೀಯ. ಕೆಂಪೇಗೌಡರ ನಂತರ ರಾಜ್ಯಕ್ಕೆ ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಣ್ಣನ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಶಕ್ತಿ ಸಿಗಲಿ” ಎಂದು ಹಾರೈಸಿದರು.
-
ಕೆ. ಹರೀಶ್ ಗೌಡ (ಚಾಮರಾಜ ಶಾಸಕ): “ನಾಡಪ್ರಭುಗಳ ಪ್ರತಿಮೆ ಪ್ರತಿಯೊಂದು ಗ್ರಾಮದಲ್ಲೂ ಸ್ಥಾಪನೆಯಾಗಬೇಕು. ಕೆಂಪೇಗೌಡರು, ಕುವೆಂಪು ಹಾಗೂ ದೇವೇಗೌಡರ ಸಾಧನೆಗಳ ಬಗ್ಗೆ ಹೆಚ್ಚಿನ ಪ್ರಚಾರವಾಗುವ ಅಗತ್ಯವಿದೆ” ಎಂದು ತಿಳಿಸಿದರು.
ಲಲಿತಾದ್ರಿಪುರ ಗ್ರಾಮಸ್ಥರ ಒಗ್ಗಟ್ಟಿನಿಂದ ನಿರ್ಮಾಣವಾದ ಈ ಪುತ್ಥಳಿ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಾಡಪ್ರಭುಗಳ ಸ್ಮರಣೆಯನ್ನು ಚಿರಸ್ಥಾಯಿಯಾಗಿಸಿದೆ. ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
