ಮೈಸೂರು, ಡಿಸೆಂಬರ್ 9, 2025 :ಹುಣಸೂರು ತಾಲೂಕಿನ ಗುರುಪುರ ಹೊರವಲಯದಲ್ಲಿ ಪತ್ತೆಯಾಗಿದ್ದ ಮೂರು ತಿಂಗಳ ಹೆಣ್ಣು ಹುಲಿಮರಿಯನ್ನು ಅಂತಿಮವಾಗಿ ಬೆಂಗಳೂರಿನ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ (Bannerghatta Rehabilitation Centre) ಸ್ಥಳಾಂತರಿಸಲಾಗಿದೆ.

ತಾಯಿಯಿಂದ ಬೇರ್ಪಟ್ಟಿದ್ದ ಈ ಮರಿಯನ್ನು ಮತ್ತೆ ತಾಯಿ ಹುಲಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ತೀವ್ರ ಪ್ರಯತ್ನ ನಡೆಸಿತ್ತು. ಈ ಭಾಗದಲ್ಲಿ ತಾಯಿ ಹುಲಿಯ ಚಲನವಲನ ಪತ್ತೆಹಚ್ಚಲು ಡ್ರೋಣ್ (Drone) ಸಹ ಬಳಸಲಾಗಿತ್ತು.ಆದರೆ, ದಿನಗಳೇ ಕಳೆದರೂ ತಾಯಿ ಹುಲಿ ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಅದರ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಮರಿ ಹುಲಿಯನ್ನು ಬನ್ನೇರುಘಟ್ಟಕ್ಕೆ ರವಾನಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತಾಯಿ ಹುಲಿಗಾಗಿ ಹಂಬಲಿಸುತ್ತಿದ್ದ ಈ ಮರಿ ಹುಲಿಯನ್ನು ಈವರೆಗೆ ವೀರನಹೊಸಹಳ್ಳಿಯ ಅರಣ್ಯ ಇಲಾಖೆ ಕಚೇರಿ ಸಿಬ್ಬಂದಿ ತಮ್ಮ ಆರೈಕೆಯಲ್ಲಿ ಇರಿಸಿಕೊಂಡಿದ್ದರು. ಸೂಕ್ತ ವೈದ್ಯಕೀಯ ಮತ್ತು ತಾಂತ್ರಿಕ ಆರೈಕೆ ನೀಡುವ ಉದ್ದೇಶದಿಂದ ಈಗ ಅದನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಈ ಮರಿ ಹುಲಿಗೆ ಬನ್ನೇರುಘಟ್ಟ ಕೇಂದ್ರದಲ್ಲಿ ವಿಶೇಷ ಆರೈಕೆ ಮತ್ತು ಪೋಷಣೆಯನ್ನು ಒದಗಿಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
