ಬೆಳಗಾವಿ, ನವೆಂಬರ್ 26, 2025 : ಕರ್ನಾಟಕದ ಸರಳ ಹಾಗೂ ಸಜ್ಜನಿಕೆಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವು ಇಡೀ ರಾಜ್ಯವನ್ನೇ ಶೋಕದಲ್ಲಿ ಮುಳುಗಿಸಿದೆ. ಇವತ್ತು ಮಹಾಂತೇಶ್ ಬೀಳಗಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ರಾಮದುರ್ಗದ ತೋಟದಲ್ಲೇ ತಾಯಿ ಸಮಾಧಿ ಪಕ್ಕದಲ್ಲಿ ಮಹಾಂತೇಶ್ ಬೀಳಗಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಅಂತ್ಯ ಸಂಸ್ಕಾರ ನಡೆಯುವ ಸ್ಥಳದಲ್ಲಿಯೂ ಕೂಡ ಕೆಲಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎನ್ನಲಾಗಿದೆ.ಮಹಾಂತೇಶ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇನ್ನು, ಅಂತಿಮಯಾತ್ರೆಯಲ್ಲಿ ಕೆಲ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೀಳಗಿ ಅವರ ನಿಧನ ಅಪಾರ ಬಂಧುಗಳು, ಅಭಿಮಾನಿಗಳಲ್ಲಿ ನೀರವ ಮೌನ ಆವರಿಸಿದೆ.
ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬರುಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ನಿನ್ನೆ ಮೃತಪಟ್ಟಿದ್ದರು . ಇವರ ಜೊತೆ ಮೂವರು ಸಂಬಂಧಿಕರು ಸಹ ಸಾವನ್ನಪ್ಪಿದ್ದರು. ತುಂಬಾ ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ ಉನ್ನತ ಸ್ಥಾನಕ್ಕೇರಿದ ಮಾದರಿ ವ್ಯಕ್ತಿತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟೆಯ ಮಹಾಂತೇಶ್ ಬೀಳಗಿ, ಬಾಲ್ಯದಲ್ಲಿ ಬಹಳ ಕಷ್ಟಪಟ್ಟು ಓದಿ ಉನ್ನತ ಹುದ್ದೆ ಅಲಂಕರಿಸಿದ್ದರು.
