ಹುಣಸೂರು, ನವೆಂಬರ್ 28, 2025 : ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗೌಡನಕಟ್ಟೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ತಾಯಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ತಡರಾತ್ರಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹುಲಿ ಸೆರೆಯಾದ ಹಿನ್ನೆಲೆಯಲ್ಲಿ ಗ್ರಾಮದ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಮದ ಹೊರವಲಯದ ಹೊಲದ ಮಧ್ಯೆ ಅಡಗಿ ಕುಳಿತಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ನಿನ್ನೆಯಷ್ಟೇ ಈ ಹುಲಿ ದಾಳಿಯಿಂದ ಗ್ರಾಮದ ಇಬ್ಬರು ರೈತರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು ಮತ್ತು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ಗ್ರಾಮಸ್ಥರ ಒತ್ತಾಯದ ಮೇರೆಗೆ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ತಡರಾತ್ರಿ ತಾಯಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ತಾಯಿ ಹುಲಿಯ ಜೊತೆ ಮರಿ ಹುಲಿಗಳಿರುವ ಸಾಧ್ಯತೆ ಇರುವುದರಿಂದ, ಅರಣ್ಯ ಇಲಾಖೆಯ ಟಾಸ್ಕ್ ಫೋರ್ಸ್ ಸಿಬ್ಬಂದಿಯು ನಾಲ್ಕು ಆನೆಗಳೊಂದಿಗೆ ಮರಿಗಳಿಗಾಗಿ ಕಾರ್ಯಾಚರಣೆಯನ್ನು ಮುಂದುವರಿಸಿದೆ.
