ಕೊಪ್ಪಳ, ನವೆಂಬರ್ 17, 2025 : ಕೊಪ್ಪಳದಲ್ಲಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಯಲಬುರ್ಗಾ ತಾಲೂಕಿನ ಮದ್ಲೂರಿನಲ್ಲಿ 39 ವರ್ಷದ ಮಹಿಳೆಯ ಮೇಲೆ ರೇಪ್ ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಮಹಿಳೆಗೆ ಮದ್ಯ ಸೇವನೆ ಮಾಡಿಸಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೊಸಪೇಟೆ ಮೂಲದ ಮಹಿಳೆ ಪರಿಚಯಸ್ಥರಿಂದ ಹಣ ಪಡೆಯಲು ಕುಷ್ಟಗಿ ಪಟ್ಟಣಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಸಂಜೆ ಬೈಕ್‌ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ಸಂತ್ರಸ್ತ ಮಹಿಳೆಗೆ ನಾಲ್ವರು ಕೊಲೆ ಬೆದರಿಕೆಯನ್ನು ಸಹವೊಡ್ಡಿದ್ದಾರೆ ಎನ್ನಲಾಗಿದೆ. ಬಲವಂತವಾಗಿ ಮದ್ಯವನ್ನು ಕುಡಿಸಿ ದೌರ್ಜನ್ಯ ಎಸಗಿದ್ದಾರೆ.
ಅಸ್ವಸ್ಥಗೊಂಡ ಸಂತ್ರಸ್ತ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಮಾಹಿತಿ ತಿಳಿದ ತಕ್ಷಣ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
