ಸರಗೂರು , ನವೆಂಬರ್ 8, 2025 : ತಾಲ್ಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಇತ್ತೀಚೆಗೆ ಹುಲಿ ದಾಳಿಗೆ ಬಲಿಯಾದ ರೈತ ದಂಡನಾಯಕ ಅವರ ಕುಟುಂಬಕ್ಕೆ ಶಾಸಕ ಅನಿಲ್ ಚಿಕ್ಕಮಾದು ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಗ್ರಾಮದ ಹೊರವಲಯದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು.

ಮೃತ ರೈತ ದಂಡನಾಯಕ ಅವರ ಮನೆಯವರಿಗೆ ಧೈರ್ಯ ತುಂಬಿದ ಶಾಸಕರು, ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಕೊಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ದಂಡನಾಯಕ ಅವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಸದ್ಯ ಗ್ರಾಮದ ಸುತ್ತಮುತ್ತಲೂ ಹುಲಿಯ ಆತಂಕ ಮನೆ ಮಾಡಿದ್ದು, ಗ್ರಾಮಸ್ಥರು ತಮ್ಮ ಅಳಲನ್ನು ಶಾಸಕರ ಬಳಿ ತೋಡಿಕೊಂಡರು.ಮೊದಲು ಹುಲಿ ಸೆರೆ ಆಗಲಿ,ಎಂದು ಒತ್ತಾಯಿಸಿದರು.ಕಾಡು ಪ್ರಾಣಿಗಳ ಹಾವಳಿಯಿಂದ ಜನ ಭಯಭೀತರಾಗಿರುವ ಹಿನ್ನೆಲೆಯಲ್ಲಿ, ಆತಂಕದಲ್ಲಿರುವ ಗ್ರಾಮಸ್ಥರಿಗೆ ಅರಣ್ಯಾಧಿಕಾರಿಗಳು ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು. ಮೊದಲು ಹುಲಿ ಸೆರೆ ಆಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಹುಲಿ ಸೆರೆ ವಿಚಾರದಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
