ನಂಜನಗೂಡು, ಮಾರ್ಚ್ 5, 2026 :ಪ್ರಸಿದ್ಧ ಪುಣ್ಯಕ್ಷೇತ್ರ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನದ ಪಕ್ಕದಲ್ಲಿ ಮಾಂಸಹಾರ ಸೇವನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಈಗ ಕಾನೂನು ಕ್ರಮ ಜರುಗಿಸಲಾಗಿದೆ. ದಾಸೋಹ ಭವನದ ಮೆಟ್ಟಿಲುಗಳ ಮೇಲೆ ಕುಳಿತು ಮಾಂಸಹಾರ ಸೇವನೆ ಮಾಡಿದ್ದ ಆರೋಪಿ ಪ್ರದೀಪ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇವಸ್ಥಾನದ ಸಮೀಪವೇ ಹೂವು ಮಾರಾಟ ಮಾಡುತ್ತಿದ್ದ ಪ್ರದೀಪ್, ಎರಡು ದಿನಗಳ ಹಿಂದೆ ದಾಸೋಹ ಭವನದ ಆವರಣದಲ್ಲಿ ಮಾಂಸಹಾರ ಸೇವಿಸಿದ್ದನು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ (EO) ಕೃಷ್ಣ ಅವರು ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದರು.
ಇನ್ನು ದೇವಸ್ಥಾನದ ಪವಿತ್ರತೆಗೆ ಧಕ್ಕೆ ತಂದ ಈ ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ, ಅಲ್ಲಿನ ಭದ್ರತಾ ಸಿಬ್ಬಂದಿಗೆ ದೇವಸ್ಥಾನದ ಆಡಳಿತ ಮಂಡಳಿಯು ನೋಟಿಸ್ ಜಾರಿ ಮಾಡಿದೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
