ತಿರುಪತಿ, ಜನವರಿ 3, 2025 : ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಕುಡುಕನೊಬ್ಬ ಕಂಪೌಂಡ್ ಹಾರಿ ಒಳನುಗ್ಗಿ ಗೋಪುರ ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುಮಾರು ಮೂರು ಗಂಟೆಗಳ ಕಾರ್ಯಾರಣೆ ನಡೆಸಿ ಭದ್ರತಾ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ವಶಕ್ಕೆ ಪಡೆದಿದ್ದಾರೆ. ಈ ಭದ್ರತಾ ಲೋಪ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ದೇಗುಲದಲ್ಲಿ ‘ಏಕಾಂತ ಸೇವೆ’ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾ ಪಡೆಗಳ ಕಣ್ತಪ್ಪಿಸಿ ಕಂಪೌಂಡ್ ಹಾರಿ ಒಳಬಂದು ಏಕಾಏಕಿ ಗೀಪುರ ಏರಿದ್ದಾನೆ. ನಂತರ ಅಲ್ಲಿದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಇದು ದೇಗುಲದ ಸಿಬ್ಬಂದಿ ಮತ್ತು ಭಕ್ತರಲ್ಲಿ ಭಯ ಹುಟ್ಟಿಸಿತು. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು.
ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ ಆತನನ್ನು ಗೋಪುರದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ.
