ಮೈಸೂರು, ನವೆಂಬರ್ 19, 2025 : ಜೆಡಿಎಸ್ ಪಕ್ಷದ 25ನೇ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ, ನವೆಂಬರ್ 21 ಮತ್ತು 22 ರಂದು ರಾಜ್ಯದಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.
ಮೈಸೂರಿನಲ್ಲಿಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎರಡು ದಿನಗಳ ಕಾಲವೂ ಜೆಡಿಎಸ್ ಬೆಳೆದು ಬಂದ ಹಾದಿಯ ಬಗ್ಗೆ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಆ ಮೂಲಕ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಲಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ವಿವೇಕಾನಂದ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್‌ಗಳಾದ ಲಿಂಗಪ್ಪ, ರವಿಕುಮಾರ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್, ರಾಜ್ಯದಲ್ಲಿ ಸಫಾರಿ ಸಮಯವನ್ನು ಹೆಚ್ಚಳ ಮಾಡುವುದರಿಂದ ಹುಲಿಗಳ ದಾಳಿ ಹೆಚ್ಚಾಗುವುದಿಲ್ಲ. ಸಫಾರಿ ನಿಲ್ಲಿಸಿರುವುದು ಸರಿಯಲ್ಲ. ಸಫಾರಿಗೆ ಹೋಗುವ ಎಲ್ಲರಿಗೂ ಹುಲಿಗಳು ಕಾಣಸಿಗುವುದಿಲ್ಲ. ಸಫಾರಿ ಬಂದ್ ಮಾಡುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ಹಾಗಾಗಿ ಸಫಾರಿಯನ್ನು ನಿಲ್ಲಿಸಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
“ಬಿಹಾರದಲ್ಲಿ ಕಾಂಗ್ರೆಸ್ ಒಂದಂಕಿಗೆ ಇಳಿದಿದೆ”
ರಾಜ್ಯದಲ್ಲಿ ಜೆಡಿಎಸ್ ಅನ್ನು ಎರಡಂಕಿಗೆ ಇಳಿದಿದೆ ಎನ್ನುತ್ತಿದ್ದರು. ಇದೀಗ ಬಿಹಾರದಲ್ಲಿ ಕಾಂಗ್ರೆಸ್ ಪಾರ್ಟಿ ಒಂದಂಕಿಗೆ ಇಳಿದಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಟೀಕಿಸಿದರು. ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಹೆಚ್.ಡಿ. ದೇವೇಗೌಡರಿಗೆ 93 ವರ್ಷವಾಗಿದೆ. ಅವರ ಮಾರ್ಗದರ್ಶನದಲ್ಲಿ ಜೆಡಿಎಸ್ ಪಾರ್ಟಿಯನ್ನು ಸಂಘಟನೆ ಮಾಡುತ್ತೇವೆ. ಹಿರಿಯ ಶಾಸಕರಾದ ಜಿ.ಟಿ. ದೇವೇಗೌಡ ಅವರು ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಪುತ್ರ ಹರೀಶ್ ಗೌಡ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕ್ರಮಗಳಿಗೂ ಜಿ.ಟಿ. ದೇವೇಗೌಡರನ್ನು ಆಹ್ವಾನಿಸಲಾಗುತ್ತಿದೆ ಎಂದು ಸಾ.ರಾ. ಮಹೇಶ್ ಸ್ಪಷ್ಟಪಡಿಸಿದರು.

