ಹುಣಸೂರು, ಡಿಸೆಂಬರ್ 1, 2025 : ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮಾದಹಳ್ಳಿ ಗ್ರಾಮದ ರೈತರಿಗೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಇಂದು ಭಾರೀ ಗಾತ್ರದ ಹೆಬ್ಬಾವೊಂದು ಸವಾಲೊಡ್ಡಿತ್ತು. ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿ, ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಮಾದಹಳ್ಳಿ ಗ್ರಾಮದ ರೈತ ಮುನಿಕುಮಾರ್ ಅವರ ಜೋಳದ ಹೊಲದಲ್ಲಿ ಈ ಘಟನೆ ನಡೆದಿದೆ. ಹೊಲದ ಬದುವಿನಲ್ಲಿ ರಾಜು ಎಂಬುವವರು ಎಂದಿನಂತೆ ಕೆಲಸ ಮಾಡುತ್ತಿದ್ದಾಗ, ದಿಢೀರನೆ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದ ರಾಜು ಮತ್ತು ಸ್ಥಳೀಯ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
7 ಅಡಿ ಉದ್ದ, 20 ಕೆಜಿ ತೂಕ
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.ರಕ್ಷಣೆ ಮಾಡಲಾದ ಹೆಬ್ಬಾವು ಸುಮಾರು 7 ಅಡಿ ಉದ್ದ ಮತ್ತು 20 ಕೆಜಿ ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ. ಹಾಗೂ 8 ರಿಂದ 10 ವರ್ಷ ವಯಸ್ಸಿನ ಹೆಣ್ಣು ಹೆಬ್ಬಾವು ಆಗಿದ್ದು, ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದು ಇಲಾಖೆ ಖಚಿತಪಡಿಸಿದೆ. ಈ ಗಾತ್ರದ ಹೆಬ್ಬಾವು ಮೊಲ, ಕುರಿ, ಮೇಕೆ ಮುಂತಾದ ಪ್ರಾಣಿಗಳನ್ನು ಸಲೀಸಾಗಿ ನುಂಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಿಸಲಾದ ಹೆಬ್ಬಾವನ್ನು ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
