ಮೈಸೂರು, ಜನವರಿ 21, 2026: ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆಯ ಚಾಮುಂಡಿ ಬೆಟ್ಟವನ್ನು ಉಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಮತ್ತು ಪರಿಸರವಾದಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕೈಯಲ್ಲಿ ಪ್ಲೇ ಕಾರ್ಡ್‌ಗಳನ್ನು ಹಿಡಿದು ಘೋಷಣೆ ಕೂಗಿದ ಸಾರ್ವಜನಿಕರು, “ಅಭಿವೃದ್ಧಿ ಮೇಲಕ್ಕೆ, ಪರಿಸರ ಪಾತಾಳಕ್ಕೆ” ಎನ್ನುವ ನೀತಿ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಇವೆಲ್ಲವೂ ಅವೈಜ್ಞಾನಿಕ ಕಾಮಗಾರಿಗಳಾಗಿದ್ದು ಬೆಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದರು.
ಬೆಟ್ಟವು ಕೇವಲ ಪ್ರವಾಸಿ ತಾಣವಲ್ಲ, ಅದು ಆಧ್ಯಾತ್ಮಿಕ ಕೇಂದ್ರವಾಗಿದೆ. ಹೀಗಾಗಿ ಅಲ್ಲಿ ಭಕ್ತಿ ಭಾವ ಮೂಡಬೇಕೇ ಹೊರತು ವಾಣಿಜ್ಯೀಕರಣದ ಗೌಜು ಗದ್ದಲಗಳು ಅತಿಯಾಗಬಾರದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರಕೃತಿಯನ್ನು ನಾಶಪಡಿಸಿ ಮಾಡುವ ಯಾವುದೇ ಅಭಿವೃದ್ಧಿ ನಮಗೆ ಬೇಡ ಎಂದು ಕಿಡಿಕಾರಿದ ಪರಿಸರ ಪ್ರೇಮಿಗಳು, ಕೂಡಲೇ ಸರ್ಕಾರ ಈ ಕಾಮಗಾರಿಗಳನ್ನು ಕೈಬಿಟ್ಟು ಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
