ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಸಂಭ್ರಮ ಕಳೆಗಟ್ಟಿದ್ದು, ಎರಡನೇ ತಂಡದಲ್ಲಿ ಆಗಮಿಸಿರುವ ಗಜಪಡೆಗೆ ಸಾಂಪ್ರದಾಯಿಕವಾಗಿ ತೂಕ ಪರೀಕ್ಷೆ ನಡೆಸಲಾಯಿತು. ನಗರದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಈ ತೂಕ ಪರೀಕ್ಷೆಯಲ್ಲಿ ‘ಸುಗ್ರೀವ’ ಆನೆಯು ಭಾರಿ ತೂಕದ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಒಟ್ಟು 5,850 ಕೆಜಿ ತೂಗುವ ಮೂಲಕ ಪ್ರಸ್ತುತ ದಸರಾ ಗಜಪಡೆಯಲ್ಲೇ ಅತ್ಯಂತ ಭಾರೀ ತೂಕದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರನಾಗಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.
ಇಲ್ಲಿಯವರೆಗೆ ತೂಕದಲ್ಲಿ ಮುಂಚೂಣಿಯಲ್ಲಿದ್ದ ‘ಶ್ರೀಕಂಠ’ ಆನೆಯನ್ನು ಸುಗ್ರೀವ ಈ ಬಾರಿ ಹಿಂದಿಕ್ಕಿದ್ದಾನೆ. ಶ್ರೀಕಂಠ 5,790 ಕೆಜಿ ತೂಕ ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಸುಗ್ರೀವ 60 ಕೆಜಿ ಹೆಚ್ಚುವರಿ ತೂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾನೆ.
ಇನ್ನುಳಿದಂತೆ ತಂಡದಲ್ಲಿದ್ದ ಹೆಣ್ಣಾನೆಗಳ ಪೈಕಿ ‘ಚೈತ್ರ’ 3,295 ಕೆಜಿ ಮತ್ತು ‘ರೂಪ’ 3,260 ಕೆಜಿ ತೂಕವನ್ನು ದಾಖಲಿಸಿವೆ. ಎರಡೂ ಆನೆಗಳು ಉತ್ತಮ ಆರೋಗ್ಯ ಸ್ಥಿತಿಯಲ್ಲಿದ್ದು, ಮುಂದಿನ ತರಬೇತಿಗೆ ಸಂಪೂರ್ಣ ಸಜ್ಜಾಗಿವೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಜಂಬೂಸವಾರಿ ಮೆರವಣಿಗೆಗೆ ಆನೆಗಳಿಗೆ ನೀಡಬೇಕಾದ ಪೌಷ್ಟಿಕ ಆಹಾರದ ಪ್ರಮಾಣವನ್ನು ನಿರ್ಧರಿಸಲು ಈ ತೂಕ ಪರೀಕ್ಷೆ ಅತ್ಯಗತ್ಯವಾಗಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲಾ ಆನೆಗಳಿಗೆ ಕಟ್ಟುನಿಟ್ಟಿನ ತರಬೇತಿ ಹಾಗೂ ವಿಶೇಷ ಆಹಾರ ಪದ್ಧತಿಯನ್ನು ಅರಣ್ಯ ಇಲಾಖೆ ಮುಂದುವರಿಸಲಿದೆ.
