ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಡ್ಯಾನ್ಸ್ ಮಾಡಿದ ಕೈದಿಗಳ ಮೇಲೆ FIR ದಾಖಲಾಗಿದೆ.
ಜೈಲಿನಲ್ಲಿ ಕೈದಿಗಳ ಡ್ಯಾನ್ಸ್ ವೀಡಿಯೋ ಜೊತೆಗೆ ಕೈಯಲ್ಲಿ ಮೊಬೈಲ್ ಹಿಡಿದು ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದವು. ಇದೀಗ ಡ್ಯಾನ್ಸ್ ಮಾಡಿದ್ದ ನಾಲ್ಕು ಮಂದಿ ಕೈದಿಗಳ ಮೇಲೆ ಕೇಸ್ ದಾಖಲಾಗಿದೆ. ಕುಣಿದು ಮೋಜು ಮಾಡಿದ್ದ ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ ಮತ್ತು ಚರಣ್ ರಾವ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೆಯೇ ಮೊಬೈಲ್ ಫೋನ್ ಬಳಸಿದ್ದ ಆರೋಪದ ಹಿನ್ನೆಲೆಯಲ್ಲಿ ಕೈದಿಗಳಾದ ತರುಣ್ ಕೊಂಡೂರು, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ ಹಾಗೂ ಜುಹಾದ್ ಹಮೀದ್ ಶಕೀಲ್‌ರನ್ನು ಜೈಲು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು, ಆಂತರಿಕ ತನಿಖೆ ಮುಂದುವರಿಸಲಾಗಿದ್ದು, ವರದಿ ಶೀಘ್ರದಲ್ಲೇ ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗಲಿದೆ. ಮದ್ಯಸೇವಿಸಿ ಕೈದಿಗಳು ಡ್ಯಾನ್ಸ್ ಮಾಡೋ ವಿಡಿಯೋ ಭಾರಿ ಚರ್ಚೆ ಹುಟ್ಟುಹಾಕಿತ್ತು.ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಕೈದಿಗಳ ವಿಚಾರಣೆ ನಡೆಸುತ್ತಿದೆ.
ಇನ್ನುಳಿದಂತೆ ಜೈಲಿನ ಬ್ಯಾರಕ್ 8ರ ಕೊಠಡಿ ಸಂಖ್ಯೆ 7ರಲ್ಲಿ ನಡೆದ ಡ್ಯಾನ್ಸ್‌ನಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಆರೋಪ ಕೇಳಿ ಬಂದಿತ್ತು. ಈ ಘಟನೆ 2018 ರಿಂದ 2025ರ ಅವಧಿಯಲ್ಲಿ ನಡೆದಿದ್ದು, ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದವರು ಹಾಗೂ ವಿಡಿಯೋ ಶೇರ್ ಮಾಡಿದವರ ಕುರಿತು ತನಿಖೆ ಆರಂಭವಾಗಿದೆ.
