ಮೈಸೂರು, ಜುಲೈ 24, 2026 : ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಹರಿದು ಬಂದರು. ಮುಂಜಾನೆಯಿಂದಲೇ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದು, ಮೊದಲ ಆಷಾಢ ಶುಕ್ರವಾರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಎರಡನೇ ಆಷಾಢ ಶುಕ್ರವಾರದ ಅಂಗವಾಗಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಎರಡನೇ ವಾರವೂ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸಿದರು. ದೇವಾಲಯದ ಒಳಾಂಗಣ ಮತ್ತು ಹೊರಾಂಗಣವನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ತೋತಾಪುರಿ ಮಾವಿನಕಾಯಿ ಹಾಗೂ ಡ್ರ್ಯಾಗನ್ ಫ್ರೂಟ್ ಬಳಸಿ ವಿಶೇಷ ಅಲಂಕಾರವೂ ಗಮನ ಸೆಳೆಯಿತು.
ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಟೌನ್‌ಶಿಪ್ ವತಿಯಿಂದ ಚಾಮುಂಡಿ ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಹಾರವಾಗಿ ಇಡ್ಲಿ, ಪೊಂಗಲ್, ಉಪ್ಪಿಟ್ಟು, ಕೇಸರಿಬಾತ್ ಹಾಗೂ ಉದ್ದಿನ ವಡೆ ವಿತರಿಸಲಾಯಿತು. ನೂರಾರು ಬಾಣಸಿಗರು ಪ್ರಸಾದ ಸಿದ್ಧಪಡಿಸಿದ್ದು, ಬೆಳಿಗ್ಗೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರಸಾದ ವಿತರಣೆ ನಡೆಯಲಿದೆ.
ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
