ಮೈಸೂರು, ಡಿಸೆಂಬರ್ 5, 2025 : ರಾಜ್ಯ ರಾಜಕಾರಣದಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಬದಲಾವಣೆ ಕುರಿತ ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಸೇರಿ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಸಿಎಂ ಬದಲಾವಣೆ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, “ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಸಹ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಪುನರುಚ್ಚರಿಸಿದರು.
“ನೀವು ಕೂಡ ಸಿಎಂ ರೇಸ್‌ನಲ್ಲಿದ್ದೀರಾ?” ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗುಂಡೂರಾವ್, “ಈ ವಿಚಾರದಲ್ಲಿ ನನ್ನನ್ನು ಯಾಕೆ ಎಳೆದು ತರುತ್ತಾ ಇದ್ದೀರಾ? ನನಗೂ ಆಸೆ ಇರುತ್ತದೆ, ಆದರೆ ಸಮಯ-ಸಂದರ್ಭ ಎಲ್ಲವನ್ನೂ ಕೂಡ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ನೋಡೋಣ” ಎಂದು ಪ್ರತಿಕ್ರಿಯಿಸಿದರು. “ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಎಲ್ಲರೂ ಸಿಎಂ ಆದರು. ಅವರ ರೀತಿಯ ಕಿತ್ತಾಟ, ಗೊಂದಲ ನಮ್ಮಲ್ಲಿ ಇಲ್ಲ. ನಿನ್ನೆ ನಡೆದ ಸಭೆಯಲ್ಲೂ ಕೂಡ ಎಲ್ಲರೂ ಒಟ್ಟಾಗಿ ಭಾಗಿಯಾಗಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ,” ಎಂದು ಅವರು ಬಿಜೆಪಿ ಆಡಳಿತಾವಧಿಯನ್ನು ನೆನಪಿಸಿದರು.
ಬಿಜೆಪಿ ನಾಯಕರ ನಿಷ್ಕ್ರಿಯತೆ ವಿರುದ್ಧ ವಾಗ್ದಾಳಿ
ಇದೇ ವೇಳೆ, ರಾಜ್ಯದಲ್ಲಿನ ಪ್ರತಿಪಕ್ಷವಾದ ಬಿಜೆಪಿ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಸಂಪೂರ್ಣ ನಿಷ್ಕ್ರಿಯವಾಗಿದೆ. ವಿಜಯೇಂದ್ರ, ಅಶೋಕ್, ಪ್ರಹ್ಲಾದ್ ಜೋಶಿಯಂತಹ ನಾಯಕರು ಕೇವಲ ಭಾಷಣ ಬಿಗಿಯುವುದರಲ್ಲೇ ಬ್ಯುಸಿ ಇದ್ದಾರೆ. ನಮ್ಮ ರಾಜ್ಯದ ರೈತರ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸುತ್ತಿಲ್ಲ. ಕೇಂದ್ರದಲ್ಲಿ ಸಂಸದರು ದ್ವನಿ ಎತ್ತುತ್ತಿಲ್ಲ. ಇವರಿಗೇನು ಜವಾಬ್ದಾರಿ ಇಲ್ವಾ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
