ಮೈಸೂರು, ಜನವರಿ 20, 2026 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ಸಣ್ಣ ಪುಟ್ಟ ವಿಚಾರಕ್ಕೆ ನಡೆದ ಗಲಾಟೆಯು ಯುವಕನೊಬ್ಬನ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾಗಿದೆ.
ನಗರದ ಉದಯಗಿರಿಯ ಬೀಡಿ ಕಾಲೋನಿ ಬಳಿ ಘಟನೆ ಸಂಭವಿಸಿದ್ದು, ಗೌಸಿಯಾನಗರದ ನಿವಾಸಿಯಾದ ಶಹಬಾಜ್ (26) ಕೊಲೆಯಾದ ದುರ್ದೈವಿ. ಆರೋಪಿ ಜುಬೇರ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಶಹಬಾಜ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಆಟೋ ಫೇರ್ ಸಂಗ್ರಹಿಸುವುದು ಹಾಗೂ ಇನ್ನಿತರ ವಿಚಾರದಿಂದ ಶಹಬಾಜ್ ಮತ್ತು ಜುಬೇರ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆಯು ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ಜುಬೇರ್ ಮತ್ತು ಆತನ ತಂಡ ಶಹಬಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಶಹಬಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
