ಕೆ.ಆರ್. ನಗರ, ಫೆಬ್ರವರಿ 11, 2026 : ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಪ್ರಸಿದ್ಧ ಕಪ್ಪಡಿ ದೇವಸ್ಥಾನದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬರನ್ನು ಯುವಕನೊಬ್ಬ ಸಾಹಸಮಯವಾಗಿ ರಕ್ಷಿಸಿದ ಘಟನೆ ನಡೆದಿದೆ.

ಅರಸನಕೊಪ್ಪಲು ಗ್ರಾಮದ ಪೂಜಾರಪ್ಪ ಎಂಬುವವರ ಪುತ್ರ ಮಂಜು ಅವರು ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಈಜು ಬಾರದ ಕಾರಣ ಮಂಜು ಅವರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಹೆಬ್ಬಾಳು ಕೊಪ್ಪಲು ಗ್ರಾಮದ ನಿವಾಸಿ ‘ಕಪ್ಪಡಿ ಮಧು’ ಎಂಬ ಯುವಕ, ತಕ್ಷಣವೇ ತನ್ನ ಜೀವದ ಹಂಗು ತೊರೆದು ನದಿಗೆ ಹಾರಿದ್ದಾರೆ.
ನದಿಯ ಮಧ್ಯಭಾಗದಲ್ಲಿ ಮುಳುಗುತ್ತಿದ್ದ ಮಂಜು ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಮಧು ಯಶಸ್ವಿಯಾಗಿದ್ದಾರೆ. ಸಕಾಲದಲ್ಲಿ ಸ್ಪಂದಿಸಿ ತನ್ನ ಪ್ರಾಣ ಉಳಿಸಿದ ಮಧು ಅವರಿಗೆ ಮಂಜು ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದರು. ಸಮಯಪ್ರಜ್ಞೆ ಮೆರೆದು ಮಾನವೀಯತೆ ಮೆರೆದ ಕಪ್ಪಡಿ ಮಧು ಅವರ ಧೈರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
