ಮೈಸೂರು, ಫೆಬ್ರವರಿ 10, 2026: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಫೆಬ್ರವರಿ 14ರಂದು ಅತ್ಯಂತ ವೈಭವದ ‘ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ’ವನ್ನು ಆಯೋಜಿಸಲಾಗಿದೆ. ಮೈಸೂರಿನ ಅವಧೂತ ದತ್ತ ಪೀಠದ ವತಿಯಿಂದ ಈ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪಾರಾಯಣಕ್ಕೆ ಚಾಲನೆ ಸಿಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಅವಧೂತ ದತ್ತ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, ಕರ್ನಾಟಕವು ಹನುಮನ ನಾಡಾಗಿರುವುದರಿಂದ ಮೈಸೂರಿನಲ್ಲಿ ಈ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಫೆಬ್ರವರಿ 14ರಂದು ರಾಮ ಮತ್ತು ಸೀತೆಯರು ಭೇಟಿಯಾದ ಪವಿತ್ರ ದಿನವಾಗಿದೆ, ಆ ಕಾರಣಕ್ಕಾಗಿ ಅದೇ ದಿನದಂದು ಹನುಮಾನ್ ಚಾಲೀಸಾ ಪಾರಾಯಣವನ್ನು ಆಯೋಜಿಸಿರುವುದು ವಿಶೇಷವಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಮಹಾಯಜ್ಞಕ್ಕಾಗಿ ದತ್ತ ಪೀಠವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸುಮಾರು 30 ಸಾವಿರ ಭಕ್ತರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಅಂದು ಆಗಮಿಸುವ ಸುಮಾರು 45 ಸಾವಿರ ಮಂದಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ಹನುಮಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.
