ಹಾಸನ: ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವರ ಇಚ್ಛೆಯಿಂದ ನಿಮ್ಮ ಸೇವೆ ಮಾಡಲು ನನಗೆ ಇನ್ನೊಂದು ಅವಕಾಶ ಸಿಗುತ್ತದೆ. ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ನನಗೆ ಮೂರನೇ ಜನ್ಮ ಸಿಕ್ಕಿದೆ. ಈ ಜನ್ಮದಲ್ಲಿ ಇನ್ನೊಂದು ವರ್ಷದೊಳಗೆ ನಿಮ್ಮ ಸೇವೆಗೆ ಅವಕಾಶ ಸಿಗಲಿದೆ ಎಂದಿದ್ದಾರೆ. ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕವಾಗಿ ಈ ರೀತಿ ಸುಳಿವು ನೀಡಿದ್ದಾರೆಯೇ ಎಂಬ ಗುಸುಗುಸು ಇದೀಗ ಆರಂಭವಾಗಿದೆ.
1.05 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಪೈಕಿ 58,000 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ವ್ಯಯಿಸುತ್ತಿದ್ದಾರೆ. ರಾಜ್ಯದಲ್ಲಿ 6.87 ಲಕ್ಷ ಕೋಟಿ ಸಾಲವಿದೆ. ಅದನ್ನು ಮರುಪಾವತಿ ಮಾಡುವವರು ಯಾರು? ಇಂದು ಕಾಂಗ್ರೆಸ್ ಸರ್ಕಾರ ಇದೆ, ನಾಳೆ ಹೋಗುತ್ತಾರೆ. ಜನರು ಅದನ್ನು ಮರುಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದಿಚುಂಚನಗಿರಿ ಮಠದ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಆರ್ ಪೇಟೆ ಕೃಷ್ಣ ಸೇರಿದಂತೆ ವಿಶ್ವ ಒಕ್ಕಲಿಗರ ಸಂಘದ ಅನೇಕರು ಬೇರೆ ಮಠಕ್ಕೆ ಹುಡುಕಾಟ ನಡೆಸಿದ್ದಾರೆ. ಹೀಗಾಗಿ, ನಾನು ಬೆಂಬಲವನ್ನು ನೀಡಿದ್ದೇನೆ. ಇದು ತಪ್ಪೇ ಎಂದು ಪ್ರಶ್ನಿಸಿದರು.
ಈ ಮಧ್ಯೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಬಂಡಾಯವನ್ನು ಶಮನಗೊಳಿಸುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದ್ದು, ಅವರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದಾರೆ.