ಮೈಸೂರು, ಏಪ್ರಿಲ್ 17, 2026: ಜಿಲ್ಲೆಯ ಮೈಸೂರು ತಾಲೂಕಿನ ದೂರ ಗ್ರಾಮದಲ್ಲಿರುವ ಪ್ರಸಿದ್ಧ ದುಗ್ಗಲಮ್ಮನ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಹುಂಡಿಯಲ್ಲಿದ್ದ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ತಡರಾತ್ರಿ ಸುಮಾರು ಎರಡು ಗಂಟೆಯ ವೇಳೆಗೆ ದೇವಸ್ಥಾನದ ಒಳಗೆ ನುಗ್ಗಿದ ಖದೀಮರು, ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಆಭರಣಗಳು ಹಾಗೂ ಭಕ್ತರು ಹಾಕಿದ್ದ ಕಾಣಿಕೆ ಹಣವಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಬೆಳಿಗ್ಗೆ ದೇವಸ್ಥಾನದ ಬಳಿ ಬಂದ ಗ್ರಾಮಸ್ಥರು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಯಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಪರಿಸರದಲ್ಲಿರುವ ಸುಳಿವುಗಳನ್ನು ಕಲೆಹಾಕಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಈ ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ದೇವಸ್ಥಾನಗಳ ಭದ್ರತೆ ಕುರಿತು ಚರ್ಚೆಗಳು ಆರಂಭವಾಗಿವೆ. ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
