ಮೈಸೂರು, ನವೆಂಬರ್ 22, 2025 : ಬೆಳಗಾವಿಯ ಕಿರು ಮೃಗಾಲಯದಲ್ಲಿ 30ಕ್ಕೂ ಹೆಚ್ಚು ಕೃಷ್ಣ ಮೃಗಗಳು ಹೆಮರಾಜಿಕ್ ಸೆಪ್ಟಿಸಿಮಿಯಾ (Haemorrhagic Septicaemia – HS) ವೈರಾಣು ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಮೈಸೂರಿನ ಐತಿಹಾಸಿಕ ಚಾಮರಾಜೇಂದ್ರ ಮೃಗಾಲಯದಲ್ಲಿ ಸೋಂಕು ಹರಡದಂತೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೈಸೂರು ಮೃಗಾಲಯವು ಸದ್ಯ 46 ಕೃಷ್ಣ ಮೃಗಗಳನ್ನು ಒಳಗೊಂಡಿದೆ. ಅಲ್ಲದೆ, ಜಿಂಕೆ, ಸಾರಂಗ, ಕಡವೆ, ನೀಲ್ ಗಾಯ್, ಜಿರಾಫೆ, ಆನೆ, ಹುಲಿ, ಸಿಂಹ, ಚಿರತೆ ಸೇರಿದಂತೆ ಬಲು ಅಪರೂಪದ ಪ್ರಾಣಿ ಮತ್ತು ಪಕ್ಷಿಗಳ ಸಂಗ್ರಹ ಇಲ್ಲಿದೆ. ಹೀಗಾಗಿ, ಯಾವುದೇ ಸೋಂಕು ಹರಡದಂತೆ ಮೃಗಾಲಯ ಆಡಳಿತ ಮಂಡಳಿ ತೀವ್ರ ಕಟ್ಟೆಚ್ಚರ ವಹಿಸಿದೆ.
ಪ್ರಾಣಿ ಮತ್ತು ಪಕ್ಷಿಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಶೇಷ ಆಹಾರವನ್ನು ವಿತರಿಸಲಾಗುತ್ತಿದೆ. ಮೃಗಾಲಯದ ಆವರಣದಾದ್ಯಂತ ಸೋಂಕು ನಿವಾರಕ ದ್ರಾವಣಗಳನ್ನು (Disinfectants) ನಿಯಮಿತವಾಗಿ ಸಿಂಪಡಿಸಲಾಗುತ್ತಿದೆ. ಎಲ್ಲಾ ಪ್ರಾಣಿ ಹಾಗೂ ಪಕ್ಷಿಗಳ ಆರೋಗ್ಯದ ಮೇಲೆ ಪಶು ವೈದ್ಯಕೀಯ ತಂಡವು ತೀವ್ರ ನಿಗಾ ವಹಿಸಿದೆ.
ಈ ಕುರಿತು ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಅನುಷಾ ಅವರು ಪ್ರತಿನಿಧಿ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಸೋಂಕು ಹರಡುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


