ಮಂಡ್ಯ, ಡಿಸೆಂಬರ್ 9, 2025 : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ, ವಿದ್ಯುತ್ ಮೀಟರ್ ರೀಡರ್ ಮೇಲೆ ರೌಡಿ ಶೀಟರ್ ಮತ್ತು ಆತನ ಕುಟುಂಬಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯ ನಗರದ ಗಾಂಧಿನಗರದ 7ನೇ ಕ್ರಾಸ್‌ನಲ್ಲಿ ನಡೆದಿದೆ.
ಮೂಲತಃ ಹುಲಿಯೂರು ದುರ್ಗದ ನಿವಾಸಿಯಾದ ಪಿ.ಸಿ. ಚನ್ನಕೇಶವ, ವಿದ್ಯುತ್ ಮೀಟರ್ ರೀಡರ್ ಹಾಗೂ ಬಿಲ್ ಕಲೆಕ್ಟರ್ ಮೇಲೆ ರೌಡಿ ಶೀಟರ್ ಅರ್ಜುನ್ ಗೌಡ ಮತ್ತು ಆತನ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಂಧಿನಗರದ 7ನೇ ಕ್ರಾಸ್‌ನಲ್ಲಿ ಅರ್ಜುನ್ ಗೌಡ ಅವರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ಬಗ್ಗೆ ಮೀಟರ್ ರೀಡರ್ ಚನ್ನಕೇಶವ ಅವರು ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ಅರ್ಜುನ್ ಗೌಡ ಮತ್ತು ಇತರ ಕುಟುಂಬ ಸದಸ್ಯರು ಚನ್ನಕೇಶವ ಅವರ ಮೇಲೆ ಏಕಾಏಕಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಚನ್ನಕೇಶವ ಅವರನ್ನು ತಕ್ಷಣವೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
“ಹಲ್ಲೆ ಮಾಡಿ ನನ್ನ ಮೊಬೈಲ್ ಸಹ ಕಿತ್ತುಕೊಳ್ಳಲಾಗಿದೆ. ನನಗೆ ನ್ಯಾಯ ಒದಗಿಸಬೇಕು,” ಎಂದು ಗಾಯಾಳು ಚನ್ನಕೇಶವ ಅವರು ಮನವಿ ಮಾಡಿದ್ದಾರೆ. ಹಾಗೂ ಘಟನೆ ಸಂಬಂಧ ಹಲ್ಲೆಗೊಳಗಾದ ಪಿ.ಸಿ. ಚನ್ನಕೇಶವ ಅವರು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಅರ್ಜುನ್ ಗೌಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
