ಮೈಸೂರು , ನವೆಂಬರ್ 22, 2025 : ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಇನ್ನೆರಡು ದಿನಗಳಲ್ಲಿ ಹೈಕಮಾಂಡ್ ತೆರೆ ಎಳೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮೈಸೂರಿನಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆ ಅಪಾಯಕಾರಿ ಹಂತ ತಲುಪುತ್ತಿರುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಹೈಕಮಾಂಡ್ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಸೇಠ್ ತಿಳಿಸಿದ್ದಾರೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಮೊದಲೇ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿತ್ತು. ಆದರೆ, ಅದು ತಡವಾಗಿದೆ.ಒಪ್ಪಂದ ಆಗಿದೆಯೋ ಇಲ್ವೋ ಎಂಬ ಗೊಂದಲ ಎರಡುವರೆ ವರ್ಷಗಳಿಂದ ಮುಂದುವರೆದಿದೆ. ಅದು ಅಪಾಯಕಾರಿ ಹಂತ ತಲುಪುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಹೈಕಮಾಂಡ್ ತನ್ನ ನಿರ್ಧಾರ ಹೇಳಲಿದೆ.ಈ ಎಲ್ಲಾ ಬೆಳವಣಿಗೆಯಿಂದ ಪಕ್ಷಕ್ಕೇನೂ ನಷ್ಟ ಇಲ್ಲ, ಆದರೆ ಗೊಂದಲ ಇರಬಾರದಿತ್ತು.ಯಾರು ಮಾತು ಕೊಟ್ಟಿದ್ದಾರೆ, ಯಾರು ಮಾತು ಕೊಟ್ಟಿಲ್ಲ, ಯಾರು ಮಾತು ತಪ್ಪಿದ್ದಾರೆ, ಇದೆಲ್ಲವೂ ಮಾತುಕತೆ ನಡೆದಾಗ ಇದ್ದಂತವರಿಗೆ ಮಾತ್ರ ಗೊತ್ತು. ಕಾಂಗ್ರೆಸ್ ಶಾಸಕರ ಮುಂದೆ ಅಧಿಕಾರ ಹಂಚಿಕೆಯ ಸೂತ್ರ ನಡೆದಿಲ್ಲ. ಹೀಗಾಗಿ ಅಲ್ಲಿ ಏನಾಗಿದೆ ಎಂಬುದು ನಮಗೆ ಏನು ಗೊತ್ತಿಲ್ಲ.ನನ್ನ ಮೇಲೆ ಡಿ ಕೆ ಶಿವಕುಮಾರ್ ಋಣ ಇದೆ. ರಾಜಕೀಯವಾಗಿ ನನ್ನನ್ನು ಬೆಳೆಸಿದ್ದು ಅವರೇ. ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನಾನು ಲಾಭ ನಷ್ಟದ ಬಗ್ಗೆ ಯೋಚನೆ ಮಾಡುವುದಿಲ್ಲ. ಇರುವ ಸತ್ಯವನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆಯೂ ನನಗೆ ಪ್ರೀತಿ ಇದೆ. ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ತನ್ವೀರ್ ಸೇಠ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರ ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹೈಕಮಾಂಡ್ ಇನ್ನೆರಡು ದಿನಗಳಲ್ಲಿ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬ ಕುತೂಹಲ ಮೂಡಿಸಿದೆ.

