ಹೆಚ್ ಡಿ ಕೋಟೆ, ಜನವರಿ 22, 2026 :ಹೆಚ್.ಡಿ. ಕೋಟೆ ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅತ್ಯಂತ ಕಳಪೆಯಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು KRIDL ಅಧಿಕಾರಿಗಳನ್ನು ತಡೆದು ದಿಗ್ಬಂಧನ ವಿಧಿಸಿದ ಘಟನೆ ನಡೆದಿದೆ.

ಅಲ್ಪಸಂಖ್ಯಾತರ ಇಲಾಖೆಯ ಒಟ್ಟು 5 ಕೋಟಿ ರೂಪಾಯಿ ಅನುದಾನದಡಿ ಮುಸ್ಲಿಂ ಬ್ಲಾಕ್‌ನಲ್ಲಿ 1.85 ಕೋಟಿ, ಚಿನ್ನಪ್ಪನಪಾಳ್ಯದಲ್ಲಿ 1.50 ಕೋಟಿ ಹಾಗೂ ನಾಗನಹಳ್ಳಿಯಲ್ಲಿ 1.65 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ನಡೆಸಲಾಗಿತ್ತು. ಆದರೆ, ಈ ಕಾಮಗಾರಿಗಳು ಅಂದಾಜು ಪಟ್ಟಿಯಂತೆ ನಡೆಯದೆ ಕೇವಲ ಹಣ ಲೂಟಿ ಮಾಡಲಾಗಿದೆ ಎಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
ಕಾಮಗಾರಿ ಪರಿಶೀಲನೆಗಾಗಿ ಗ್ರಾಮಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ಸುತ್ತುವರಿದ ಗ್ರಾಮಸ್ಥರು, ಕೂಡಲೇ ಕಾಮಗಾರಿಯ ಅಂದಾಜು ಪಟ್ಟಿ (Estimate Copy) ನೀಡುವಂತೆ ಬಿಗಿಪಟ್ಟು ಹಿಡಿದರು. ಅಂದಾಜು ಪಟ್ಟಿ ನೀಡುವವರೆಗೂ ಗ್ರಾಮದಿಂದ ಹೊರಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ಸಂಜೆಯವರೆಗೂ ಗ್ರಾಮದಲ್ಲೇ ಉಳಿಯಬೇಕಾಯಿತು.
ವಿಷಯ ತಿಳಿದು ಸ್ಥಳಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂತಿಮವಾಗಿ ಅಂದಾಜು ಪಟ್ಟಿಯನ್ನು ಒದಗಿಸಿ, ಕಾಮಗಾರಿಯ ಗುಣಮಟ್ಟದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಅಧಿಕಾರಿಗಳನ್ನು ಬಿಡುಗಡೆ ಮಾಡಿದರು.
