ಮೈಸೂರು, ಜನವರಿ 17,2026 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಫ್ಲೆಕ್ಸ್ ರಾಜಕಾರಣ ತಾರಕಕ್ಕೇರಿದೆ.ಚುಂಚನಕಟ್ಟೆ ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಳವಡಿಸಲಾಗಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ. ಮಹೇಶ್, ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಹಾಗೂ ಎಂಎಲ್ಸಿ ಎಚ್. ವಿಶ್ವನಾಥ್ ಅವರ ಭಾವಚಿತ್ರಗಳಿದ್ದ ಫ್ಲೆಕ್ಸ್ ಅನ್ನು ದುಷ್ಕರ್ಮಿಯೊಬ್ಬ ಹರಿದು ಹಾಕಿ, ಕಾಲಿನಿಂದ ಒದ್ದು ಬೀಳಿಸುವ ಮೂಲಕ ವಿಕೃತಿ ಮೆರೆದಿದ್ದಾನೆ.

ಈ ಕೃತ್ಯದ ಹಿಂದೆ ಸ್ಥಳೀಯ ಶಾಸಕ ಡಿ. ರವಿಶಂಕರ್ ಅವರ ಅಭಿಮಾನಿಗಳ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಸ್ತೂರು ಗ್ರಾಮವು ಶಾಸಕ ಡಿ. ರವಿಶಂಕರ್ ಅವರ ಸ್ವಗ್ರಾಮವಾಗಿರುವ ಕಾರಣ, ಇಲ್ಲಿ ಬೇರೆ ಯಾವುದೇ ಪಕ್ಷದ ಅಥವಾ ನಾಯಕರ ಫ್ಲೆಕ್ಸ್ ಅಳವಡಿಸಬಾರದು ಎಂದು ಈ ಹಿಂದೆಯೇ ತಾಕೀತು ಮಾಡಲಾಗಿತ್ತು ಎನ್ನಲಾಗಿದೆ. ಫ್ಲೆಕ್ಸ್ ಅನ್ನು ಕಾಲಿನಿಂದ ಒದೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಶವಂತ್ ಎಂಬುವವರು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
