ಮೈಸೂರು, ನವೆಂಬರ್ 10, 2025 : ಮೈಸೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲೇ ವಿದ್ಯಾರ್ಥಿಗಳು ರಾ್ಯಾಗಿಂಗ್ ನಡೆಸಿದ್ದು, ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದಾಗಿ 13 ವರ್ಷದ ಬಾಲಕನೊಬ್ಬ ವೃಷಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಸದ್ಯ ಹಾಸಿಗೆ ಹಿಡಿದಿದ್ದು, ಶಾಲೆ ಮತ್ತು ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಘಟನೆ ನಡೆದಿರುವುದು ಜಯಲಕ್ಷ್ಮೀಪುರಂನಲ್ಲಿರುವ ಫೇಮಸ್ ಶಾಲೆಯೊಂದರಲ್ಲಿ. ಕುವೆಂಪುನಗರದ ನಿವಾಸಿಯಾಗಿರುವ ಹಲ್ಲೆಗೊಳಗಾದ ಬಾಲಕನ ಮೇಲೆ ಮೂವರು ಸಹಪಾಠಿಗಳು ಸಿನಿಮಾ ಸ್ಟೈಲ್‌ನಲ್ಲೇ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಸಹ ವಿದ್ಯಾರ್ಥಿಗಳು ಬಾಲಕನನ್ನು ಜಾಡಿಸಿ ಒದ್ದ ಪರಿಣಾಮ, ಆತನಿಗೆ ಗಂಭೀರ ಗಾಯವಾಗಿದ್ದು, ವೃಷಣ ಆಪರೇಷನ್ ಮಾಡಿಸುವ ಪರಿಸ್ಥಿತಿ ಎದುರಾಗಿದೆ. ಓದಿ, ಆಟವಾಡಬೇಕಿದ್ದ ಮಗನ ಸ್ಥಿತಿ ಕಂಡು ಪೋಷಕರು ಮತ್ತು ತಾಯಿ ರೋಧಿಸುತ್ತಿದ್ದಾರೆ. ಈ ಘಟನೆಯಿಂದಾಗಿ ಮಗನ ಭವಿಷ್ಯದ ಬಗ್ಗೆ ಪೋಷಕರು ಬೆಚ್ಚಿಬಿದ್ದಿದ್ದಾರೆ.
ಎಫ್‌ಐಆರ್ ದಾಖಲು: ಪ್ರಮುಖರ ಬಂಧನಕ್ಕೆ ಆಗ್ರಹ
ಈ ಗಂಭೀರ ಘಟನೆ ನಡೆದು ಇಷ್ಟಾದರೂ ವಿದ್ಯಾಸಂಸ್ಥೆ ಯಾವುದೇ ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ, ಪೋಷಕರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೆರವು ಕೇಳಿಕೊಂಡಿದ್ದಾರೆ. ಪೋಷಕರ ದೂರಿನ ಮೇರೆಗೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಮೂವರು ಬಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎ1 ಆರೋಪಿ: ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಶಿಕ್ಷಕರು.
ಇತರೆ ಆರೋಪಿಗಳು: ಮೂವರು ಹಲ್ಲೆ ಮಾಡಿದ ಬಾಲಕರು (ಜೆ1, ಜೆ2, ಜೆ3).
ಎಫ್‌ಐಆರ್‌ನಲ್ಲಿ ಕಲಂ 115(2), 117(2), 125(ಬಿ), ಬಿಎನ್‌ಎಸ್ ಆ್ಯಕ್ಟ್ 2023 ಕಲಂ 75 ಹಾಗೂ ಜೆಜೆ ಆ್ಯಕ್ಟ್ 2015 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಷ್ಠಿತ ವಿದ್ಯಾಸಂಸ್ಥೆ ಮತ್ತು ಸಹ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
